Advertisement

ಮನೆಗಳಿಗೆ ಭೇಟಿ ನೀಡಿ ಜಾನಪದ ಕಲೆ ಪ್ರದರ್ಶನ

11:34 PM Mar 15, 2020 | Sriram |

ಬದಿಯಡ್ಕ:ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ. ಮಾತ್ರವಲ್ಲದೆ ನಮ್ಮ ನಾಗರಿಕತೆಯ ಸಂಕೇತವೂ ಹೌದು. ದೇಸೀಯ ಸೊಗಡಿನೊಂದಿಗೆ ಸಮಾಜದ ಅಂತಃಕರಣವನ್ನು ಒಳಗೊಂಡ ಈ ಕಲೆಗಳು ತಮ್ಮ ಹಿರಿತನ ಮತ್ತು ಸಿರಿವಂತಿಕೆಯ ಮೂಲಕ ಜನಮನದಲ್ಲಿ ಸದಾ ಸ್ಥಾನವನ್ನು ಉಳಿಸಿಕೊಂಡಿವೆ.

Advertisement

ಆದರೆ ಕಾಲದೊಂದಿಗೆ ಬದಲಾದ ಜೀವನ ಶೆ„ಲಿ, ಆಚಾರ ವಿಚಾರಗಳು ಜನಪದ ಸಂಸ್ಕೃತಿ, ಜಾನಪದ ಕಲೆಗಳ ಮೇಲೆ ಗಾಢವಾದ ಪರಿಣಾಮ ಭೀರಿದ್ದು ಹಲವಾರು ಕಲೆಗಳನ್ನು ತೆರೆಮರೆಗೆ ಸರಿಸಿರುವುದು ವಿಷಾಧನೀಯ.

ಅಳಿವಿನಂಚಿನಲ್ಲಿರುವ ತುಳುನಾಡಿನ ಜನಪದ ಕಲೆಗಳು, ಹಾಡುಗಳು, ನರ್ತನಗಳಿಗೆ ಮರುಜೀವ ತುಂಬಿ ಯುವಜನಾಂಗಕ್ಕೆ ಈ ಕಲೆಗಳನ್ನು ಪರಿಚಯಿಸಿ ಸಂಸ್ಕೃತಿಯ ಹಿರಿಮೆಯನ್ನೂ, ಕಲೆಯ ಪ್ರೌಢಿಮೆಯನ್ನೂ ಮನದಟ್ಟು ಮಾಡಬೇಕಾದ ಅಗತ್ಯವಿದೆ. ಆದುದರಿಂದ ಈ ಕಾಲಘಟ್ಟದಲ್ಲಿ ಎದುರಾಗುತ್ತಿರುವ ಕೆಲವು ಜ್ವಲಂತ ಸಮಸ್ಯೆಗಳಿಂದ ಬೇಸತ್ತ ಕುಟುಂಬವೊಂದು ಊರಿನ ಮಾರಿ ಕಳೆಯುವುದಕ್ಕಾಗಿ ತೆರೆಮೆರೆಗೆ ಸರಿದಿದ್ದ ಕಲೆಯನ್ನು ಮತ್ತೂಮ್ಮೆ ಬೆಳಕಿಗೆ ತರಲು ಮುಂದಾಗಿದೆ..

ಕುಂಬಳೆ ಪಂಚಾಯತಿನ ಕಿದೂರು ಗ್ರಾಮದ ಕುಂಟಗೇರಡ್ಕ ಚನ್ಯಾರು ಮತ್ತು ಕುಟುಂಬ ಚಿನ್ನು ನಲಿಕೆಯೆಂಬ ಪ್ರಾಚೀನ ಕಲಾರೂಪವನ್ನು ಪ್ರದರ್ಶಿಸುತ್ತಾ ಈ ಪ್ರದೇಶದ ಮನೆಮನೆಗಳಿಗೆ ಭೇಟಿ ನೀಡಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದೆ.

ಹಿಂದಿನಿಂದಲೇ ಕನ್ಯಾಪು, ದುಡಿನಲಿಕೆ ಮುಂತಾದ ಕಲಾರೂಪಗಳಂತೆ ಚಿನ್ನು ನಲಿಕೆಯೂ ಒಂದು ಸಮುದಾಯದ ಸಂಸ್ಕೃತಿ, ಕುಲಕಸುಬಾಗಿತ್ತು.

Advertisement

ಸುಮಾರು ಮೂರು ವರುಷಗಳ ಹಿಂದೆ ಗದ್ದೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅಳಿದುಳಿದ ಕಲೆಗಳ ಬಗ್ಗೆ ಮಾತನಾಡುತ್ತಿರುವಾಗ ಚಿನ್ನು ನಲಿಕೆ ನೆನಪಿಗೆ ಬಂತು. ಹಿಂದೆ ನಮ್ಮ ಹಿರಿಯರು ಇದನ್ನು ಪ್ರದರ್ಶಿಸುತ್ತಿದ್ದರು. ಆದರೆ ಕಾಲಕ್ರಮೇಣ ನಮ್ಮಿಂದ ದೂರಾದ ಈ ಕಲೆಗೆ ಪುನರ್ಜೀವ ನೀಡುವ ನಿಟ್ಟಿನಲ್ಲಿ ಪುನಃ ಕಲೆಯನ್ನು ಪ್ರದರ್ಶಿಸುವ ಬಗ್ಗೆ ಆಲೋಚಿಸಿದೆವು.

ಆದರೆ ಹಿಂದಿನವರು ಬಳಸುತ್ತಿದ್ದ ದುಡಿ ಈಗ ಬಳಸುವ ಸ್ಥಿತಿಯಲ್ಲಿರದೇ ಇರುವುದರಿಂದ ಹೊಸ ದುಡಿಯನ್ನು ಅರಸಿ ಹಲವೆಡೆ ಸುತ್ತಾಡಿದೆವು. ಕೊನೆಗೂ ಬದಿಯಡ್ಕ ಬಳಿಯ ಬಾರಡ್ಕದಲ್ಲಿ ದುಡಿ ಲಭ್ಯವಿರುವ ಮಾಹಿತಿ ತಿಳಿದು ಅಲ್ಲಿಂದ ದುಡಿಯನ್ನು ತಂದೆವು ಎನ್ನುತ್ತಾರೆ ಚನ್ಯಾರು.

ಅಗತ್ಯದ ತಯಾರಿಯ ಬಳಿಕ ಕುಂಭ(ಮಾಯಿ) ಮಾಸದ ಪೌರ್ಣಮಿ ಯಂದು ಚಿನ್ನುವಿನ ವೇಷ ಕಟ್ಟಿ ಮನೆಮನೆಗೆ ಹೋಗಿ ದುಡಿ ಸದ್ದುಮಾಡಿ ಚಿನ್ನು ನಲಿವಾಗ ಮನಸಿಗೆ ಅದೇನೋ ಸಂತƒಪ್ತಿ ಮೂಡಿತು ಎಂದು ಸಂಭ್ರಮದಿಂದ ತನ್ನ ಆನಂದವನ್ನು ಹಂಚಿಕೊಂಡ ಚನ್ಯಾರು ಹಿಂದೆ ಹೊಟ್ಟೆಗೆ ಅನ್ನವಿಲ್ಲದೆ ಸೊಪ್ಪು ತಿಂದು ಬದುಕುವ ಬಡತನವಿದ್ದ ಕಾಲದಲ್ಲೂ ನಮ್ಮ ಹಿರಿಯರು ಕಲೆಯ ಮೇಲಿನ ಗೌರವವನ್ನು ಬಿಟ್ಟವರಲ್ಲ.

ಆದುದರಿಂದ ಊರಲ್ಲಿ ಯಾವುದೇ ರೋಗಗಳು ಕಾಡುತ್ತಿರಲಿಲ್ಲ. ಆದರೆ ಈಗ ಮನುಷ್ಯ ಬದುಕುವ ರೀತಿ ಬದಲಾಗಿದೆ.

ಹಲವಾರು ರೋಗಗಳು ದಿನದಿಂದ ದಿನಕ್ಕೆ ಹುಟ್ಟಿಕೊಂಡು ಜನರನ್ನು ಭಯಭೀತಿಯಿಂದ ಬದುಕುವಂತೆ ಮಾಡುತ್ತಿವೆ. ಹಿಂದೆ ಆಟಿಕೆಳಂಜ, ಸೋಣದ ಜೋಗಿ, ಕನ್ಯಾಪು ಸೇರಿದಂತೆ ಬೇರೆ ಬೇರೆ ಜಾನಪದ ಆಚರಣೆಗಳು, ಕುಣಿತಗಳು ಊರಿನ ಮಾರಿ ಕಳೆಯುತ್ತಿದ್ದುವು.

ಒಂದೊಂದು ಆಚರಣೆಗಳ ಹಿಂದೆ ಒಂದೊಂದು ಒಳ್ಳೆಯ ಉದ್ಧೇಶಗಳು ಅಡಕವಾಗಿದ್ದುವು. ಆದರೆ ಇಂದು ಅದು ಮರೆಯಾಗಿದೆ. ಆದುದರಿಂದ ದೇಶದ ಮಾರಿ ಕಳೆದು ಮನೆಮನೆಯಲ್ಲೂ ಸೌಭಾಗ್ಯ,ಭೂಮಿಯಲ್ಲಿ ಫಸಲಿನ ಸಮƒದ್ಧಿ, ಮನಮನದಲ್ಲಿ ನೆಮ್ಮದಿಯನ್ನು ತುಂಬಬಲ್ಲ ಚಿನ್ನು ನಲಿಕೆಯನ್ನು ಪುನಃ ಪ್ರಾರಂಭಿಸಿರುವುದಾಗಿ ಅವರು ಹೇಳುತ್ತಾರೆ. ಇದು ಇತರ ಜನಪದ ಕಲೆಗಳ ಔನ್ನತ್ಯಕ್ಕೂ ಪ್ರೇರಣೆಯಾಗಲಿ.

ಜನಪದ ಕಲೆಗಳು ದೈವತ್ವ ಇರುವ ಕಲೆ; ಮೂಡನಂಬಿಕೆಯಲ್ಲ ಜನಪದ ಕಲೆಗಳು ದೈವತ್ವವುಳ್ಳ ಕಲಾಪ್ರಕಾರಗಳಾಗಿದ್ದು ಆದೊಂದು ಮೂಡನಂಬಿಕೆಯಲ್ಲ. ಹಿಂದೆ ಊರಿನ ಮಾರಿ ಕಳೆದು ಉದ್ಧಾರ ಮಾಡುತ್ತಿದ್ದ ಇಂತಹ ಕಲೆಗಳು ಮರೆಯಾಗುತ್ತಿದ್ದಂತೆ ನೂರಾರು ರೋಗ ರುಜಿನಗಳು ಎದುರಾಗುತ್ತಿರುವುದನ್ನು ಕಣ್ಣಾರೆ ಕಾಣಬಹುದಾಗಿದೆ. ಇತೀ¤ಚಿಗಿನ ದಿನಗಳಲ್ಲಿ ಆದರ ತೀವ್ರತೆ ಜನಜೀವನಕ್ಕೇ ಸವಾಲಾಗಿದೆ.

ಆದುದರಿಂದ ಹಿರಿದಾದ ಜನಪದ ಸಂಸ್ಕೃತಿಯನ್ನು, ತುಳುನಾಡಿನ ಹಿರಿಮೆಯನ್ನೂ ಎತ್ತಿಹಿಡಿಯುವ ಇಂತಹ ಕಲೆಗಳನ್ನು ಬೆಳಕಿಗೆ ತಂದು ಕಲೆ ಮತ್ತು ಕಲಾವಿದರಿಗೆ ನ್ಯಾಯ ಒದಗಿಸಬೇಕಾದುದು ಅತೀ ಅಗತ್ಯ. ಜನಪದ ಉತ್ಸವಗಳು ಅಥವಾ ಯಾವುದೇ ಜನಪದೀಯ ಕಾರ್ಯಕ್ರಮಗಳಲ್ಲಿ ಇಂತಹ ಕಲೆಗಳ ಪ್ರದರ್ಶನಕ್ಕೂ ಅವಕಾಶ ನೀಡುವ ಮೂಲಕ ಇತರ ಸಮುದಾಯದವರೂ ತೆರೆಮರೆಗೆ ಸರಿದ ಇಂತಹ ಆಚರಣೆ, ಕಲೆಗಳನ್ನು ಪ್ರದರ್ಶಿಸಲು ಮುಂದೆ ಬರುವಂತೆ ಮಾಡಬೇಕು. ಕಲಾವಿದರೂ ಕಲೆಯ ಮಹತ್ವವನ್ನರಿತು ಇಂತಹ ಕಲೆಗಳನ್ನು ಕಟ್ಟಿಯಾಡುವಲ್ಲಿ ಹೆಚ್ಚಿನ ಉತ್ಸಾಹ ತೋರಬೇಕು. ಇವರಿಗೆ ಸೂಕ್ತ ಪ್ರೋತ್ಸಾಹ ನೀಡಿ ನಮ್ಮ ಸಂಸ್ಕೃತಿಯ ತಾಯಿಬೇರನ್ನು ಭದ್ರವಾಗಿಡಬೇಕಾದ ಕರ್ತವ್ಯ ನಮ್ಮದು.
-ಶ್ರೀನಿವಾಸ ಆಳ್ವ ಕಳತ್ತೂರು.
ತುಳು ಸಾಹಿತಿ. ಚಿಂತಕ

Advertisement

Udayavani is now on Telegram. Click here to join our channel and stay updated with the latest news.

Next