ಮೈಸೂರು: ಕಪಿಲೆಯ ಪ್ರವಾಹದಿಂದ ತತ್ತರಿಸಿರುವ ನಂಜನಗೂಡಿಗೆ ಶನಿವಾರ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿದರು.
ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಅಪಾಯಕ್ಕೆ ಸಿಲುಕಿರುವ ಮಲ್ಲನಮೂಲೆ ಮಠದ ಬಳಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಪ್ರದೇಶ, ನಂಜನಗೂಡು ಪಟ್ಟಣದಲ್ಲಿ ಶ್ರೀಕಂಠೇಶ್ವರ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಾದ ಮುಡಿಕಟ್ಟೆ, ತೋಪಿನ ಬೀದಿ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ಹೆಜ್ಜಿಗೆ ಸೇತುವೆ, ಬೊಕ್ಕಹಳ್ಳಿ, ಕುಳ್ಳಂಕನ ಹುಂಡಿ, ಸುತ್ತೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂಜಗೂಡಿನಲ್ಲಿ ತೆರೆಯಲಾಗಿರುವ ಗಂಜಿಕೇಂದ್ರಕ್ಕೂ ಸಚಿವದ್ವಯರು ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪರಿಸ್ಥಿತಿ ಅವಲೋಕಿಸಿದರು. ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಬಿ.ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಜನರ ರಕ್ಷಣೆಗೆ ಆದ್ಯತೆ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದ್ದು, ಪರಿಹಾರ ಕಾರ್ಯದ ಬಗ್ಗೆ ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಗುಡ್ಡಗಳು ಕುಸಿದು ನೂರಾರು ಜನರು ನಿರಾಶ್ರಿತರಾಗಿ ಹೊರ ಜಗತ್ತಿನಿಂದ ಸಂಪರ್ಕ ಕಡಿದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹೊರತರುವುದು ನಮ್ಮ ಮೊದಲ ಆದ್ಯತೆ. ಆದರೆ, ಹವಾಮಾನ ವೈಪರೀತ್ಯದಿಂದ ರಕ್ಷಣಾ ಕಾರ್ಯಕ್ಕೆ ತೊಡಕು ಉಂಟಾಗಿದೆ ಎಂದು ತಿಳಿಸಿದರು.