ವಿಧಾನಸಭೆ: ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ಬುಧವಾರ ಉಪ ಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿಯವರು ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪ್ರಸ್ತಾಪ ಮಂಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಗೇರಿ ಅವರ ಹೆಸರು ಸೂಚಿಸಿದರು. ಬಸವರಾಜ ಬೊಮ್ಮಾಯಿ ಅನುಮೋದಿಸಿದರು. ನಂತರ, ಕಾಗೇರಿ ಅವರನ್ನು ಯಡಿಯೂರಪ್ಪ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಪೀಠಕ್ಕೆ ಕರೆ ತಂದರು.
ಶಿಸ್ತಿನ ಸಿಪಾಯಿ: ನಂತರ, ಸಿಎಂ ಯಡಿಯೂರಪ್ಪ ಮಾತನಾಡಿ, ಸ್ವೀಕರ್ ಹುದ್ದೆಗೆ ಅತ್ಯಂತ ಅರ್ಹ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತೋಷದ ಸಂಗತಿ. ಈ ಸದನದ ಘನತೆ, ಗೌರವ ಎತ್ತಿ ಹಿಡಿಯುತ್ತಾರೆ ಎಂಬ ಭರವಸೆ, ವಿಶ್ವಾಸ ನನಗಿದೆ ಎಂದರು. ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಈ ಸದನದ 224 ಸದಸ್ಯರ ಹಕ್ಕು ರಕ್ಷಣೆ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ವರ್ಷಕ್ಕೆ 60 ದಿನ ಸದನ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸೂಕ್ಷ್ಮತೆ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮಾತನಾಡಿ, ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು ನೀವು. ಆರ್‌ಎಸ್‌ಎಸ್ ಸಿದ್ಧಾಂತ ಬೇರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಡಿ ಇಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸೂಕ್ಷ್ಮವಾಗಿ ಹೇಳಿ ದರು. ಬಿಜೆಪಿಯ ಜಗದೀಶ್ ಶೆಟ್ಟರ್ ಮಾತ ನಾಡಿ, “ಆರ್‌ಎಸ್‌ಎಸ್ ಸ್ವಯಂ ಸೇವಕರಾಗಿ ನಾವು ಕೆಲಸ ಮಾಡಿರುವುದಕ್ಕೆ ಹೆಮ್ಮೆ ಇದೆ. ಆದರೆ, ಸ್ಪೀಕರ್ ಸ್ಥಾನದಲ್ಲಿ ಅಲಂಕರಿಸಿದ ಮೇಲೆ ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಸಂವಿಧಾನದ ಆಶಯ ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ ಎಂದು ರಮೇಶ್‌ಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮತ್ತೂಬ್ಬ ಹಿರಿಯ ಸದಸ್ಯ ಕೆ.ಎಸ್.ಈಶ್ವರಪ್ಪ ಮಾತನಾಡಿ, ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದವರಿಗೆ ಶಿಸ್ತು, ಬದ್ಧತೆ ಇರುತ್ತದೆ. ನನ್ನ ಅಣ್ಣ ಆರ್‌ಎಸ್‌ಎಸ್‌ಗೆ ಹೋಗುತ್ತಿದ್ದ. ನಮ್ಮ ಊರಿನಲ್ಲಿರುವವರು ಯಾಕೆ ಅಲ್ಲಿಗೆ ಕಳುಹಿಸುತ್ತೀರಿ, ಅಲ್ಲಿ ಬ್ರಾಹ್ಮಣರದೇ ಪಾರುಪತ್ಯ, ಹಿಂದುಳಿದವರನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ ಎಂದೆಲ್ಲಾ ನಮ್ಮ ತಂದೆಗೆ ಹೇಳಿದ್ದರು. ಒಮ್ಮೆ, ನಮ್ಮ ತಂದೆ ಶಾಖೆಗೆ ಹೋಗಬೇಡ ಎಂದು ಅಣ್ಣನಿಗೆ ಹೊಡೆದು ಮನೆಯಿಂದ ಹೊರಗೆ ಕಳುಹಿಸಿದರು. ಮೂರು ದಿನವಾದರೂ ಆತ ಬರಲಿಲ್ಲ. ಆಗ ನಮ್ಮ ತಂದೆ-ತಾಯಿ ಅಣ್ಣನ ಹುಡುಕುತ್ತಿದ್ದಾಗ ಆಂಜನೇಯ ದೇವಾಲಯದ ಅರ್ಚಕರ ಮನೆಯಲ್ಲಿ ಇರಬಹುದು ಎಂದು ಯಾರೋ ಹೇಳಿದರು.
ಅಲ್ಲಿಗೆ ಹೋಗಿ ನಮ್ಮ ತಂದೆ ನೋಡಿದಾಗ ಬ್ರಾಹ್ಮಣರಾದ ಅರ್ಚಕರು ಹಿಂದುಳಿದ ವರ್ಗಕ್ಕೆ ಸೇರಿದ ನಮ್ಮ ಅಣ್ಣನನ್ನು ತಮ್ಮ ಮಕ್ಕಳ ಜತೆ ಕೂರಿಸಿ ಊಟ ಮಾಡಿಸುತ್ತಿದ್ದರು. ಇದನ್ನು ನೋಡಿದ ನಂತರ ನಮ್ಮ ತಂದೆಗೆ ಆರ್‌ಎಸ್‌ಎಸ್ ಬಗೆಗಿನ ಕಲ್ಪನೆ ಬದಲಾಯಿತು. ನಂತರ ನಾನೂ ಶಾಖೆಗೆ ಹೋದೆ, ಅದರಿಂದಲೇ ಇಲ್ಲಿ ನಿಂತಿದ್ದೇನೆ. ಆರ್‌ಎಸ್‌ಎಸ್, ಬಿಜೆಪಿ ಎಂದರೆ ಹಿಂದುತ್ವ ಎಂದು, ಅದು ಕೇವಲ ಹಿಂದೂಗಳಿಗೆ ಎಂದು ಬೇರ್ಪಡಿಸುವ ಮಾತುಗಳನ್ನು ಆಡಲಾಗುತ್ತಿದೆ. ಆದರೆ, ಹಿಂದುತ್ವ ಎಂಬುದು ಜೀವನ ಪದ್ಧತಿ. ಇದನ್ನು ನ್ಯಾಯಾಲಯವೇ ಹೇಳಿದೆ ಎಂದು ರಮೇಶ್‌ಕುಮಾರ್ ಅವರ ಮಾತಿಗೆ ಮಾತಿನಲ್ಲೇ ಚುಚ್ಚಿದರು.
ನೂತನ ಸ್ಪೀಕರ್ ಪರಿಚಯ
* ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಕಾರ್ಯಕರ್ತರಾಗಿ ಸಕ್ರಿಯ.
* ರಾಜ್ಯ ಕಾರ್ಯದರ್ಶಿಯಾಗಿ, ಐದು ವರ್ಷ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಿ, ಭ್ರಷ್ಟಾಚಾರ ವಿರೋಧಿ ಹೋರಾಟ, ಸಾಮಾಜಿಕ , ಶೈಕ್ಷಣಿಕ, ಪರಿಸರ ಸಮಸ್ಯೆಗಳ ಹೋರಾಟದಲ್ಲಿ ಭಾಗಿ.
1990ರಿಂದ ಸಕ್ರಿಯ ರಾಜಕೀಯ ಪ್ರವೇಶ. 1994ರವರೆಗೆ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.
* 1994ರಲ್ಲಿ ಪ್ರಥಮ ಬಾರಿಗೆ ಅಂಕೋಲಾ ವಿಧಾನಸಭೆಯಿಂದ ಆಯ್ಕೆ. ಸತತ ಮೂರು ಬಾರಿ ಆ ಕ್ಷೇತ್ರ ಹಾಗೂ 2008 ರಿಂದ ಸತತ ಮೂರು ಬಾರಿ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಪುನರಾಯ್ಕೆ.
* 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಣೆ.
ಸಭಾಧ್ಯಕ್ಷ ಪೀಠ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ತರ ಸ್ಥಾನ ಪಡೆದುಕೊಂಡಿದೆ. ನೀವು ಎಬಿವಿಪಿ, ಆರ್‌ಎಸ್‌ಎಸ್, ಬಿಜೆಪಿ ಹಿನ್ನೆಲೆಯಿಂದ ಬಂದಿದ್ದರೂ ಸ್ಪೀಕರ್ ಪೀಠ ಅಲಂಕರಿಸಿದ ಮೇಲೆ ಅದೆಲ್ಲದರ ಸೋಂಕಿನಿಂದ ಹೊರಗೆ ಬಂದಂತೆ. ಈಗ ನೀವು ಪಕ್ಷಾತೀತರು, ಹೊಣೆಗಾರಿಕೆಯೂ ಹೆಚ್ಚಾಗಿದೆ.
-ಸಿದ್ದರಾಮಯ್ಯ, ಮಾಜಿ ಸಿಎಂ