Advertisement

ಶಾಸಕರು ಕಾವಲುಗಾರರಾಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

09:57 AM Jan 17, 2020 | sudhir |

ಬೆಂಗಳೂರು: ಕಾರ್ಯಾಂಗದ ಜವಾಬ್ದಾರಿ ಹೆಚ್ಚಿಸಲು ಶಾಸಕಾಂಗರು ವಿಮರ್ಶಕರು ಹಾಗೂ ಕಾವಲುಗಾರರಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

Advertisement

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ 7ನೇ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತ ಪ್ರಾಂತ್ಯದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ಶಾಸಕಾಂಗಗಳು ಸರ್ಕಾರದ ವರದಿ, ಬಜೆಟ್‌ ವಿಶ್ಲೇಷಣೆ, ಲೆಕ್ಕ ಪರಿಶೋಧನೆ ಹಾಗೂ ಇತರೆ ದಾಖಲೆಗಳನ್ನು ಅವಲೋಕಿಸಲು ಸಮಯ ನಿಗದಿಪಡಿಸಬೇಕು. ಕಾರ್ಯಾಂಗದ ಜೊತೆಗೆ ವಸ್ತು ನಿಷ್ಠ ಸಮಸ್ಯೆಯೊಂದಿಗೆ ವ್ಯವಹರಿಸಲು ಶಾಸಕರಿಗೆ ಸಮರ್ಪಕ ಹಾಗೂ ಸಕಾಲಿಕ ಮಾಹಿತಿ ಅಗತ್ಯವಿರುತ್ತದೆ. ಶಾಸಕರು ತಮ್ಮ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಶಾಸಕಾಂಗ ಸೂಕ್ತ ಸೇವೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಶಾಸಕರು ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ಮಾಹಿತಿ ಒದಗಿಸಲು ಸಂಶೋಧನಾ ಕೇಂದ್ರಗಳು, ಮಾಹಿತಿ ಕಣಜಗಳು, ಆಯವ್ಯಯ ಕಚೇರಿಯಂತಹ ಸೌಲಭ್ಯಗಳು ಹೇಗಿರಬೇಕು ಎನ್ನುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಅಲ್ಲದೆ ಶಾಸಕರಿಗೆ ಸೂಕ್ತ ಸಂದರ್ಭದಲ್ಲಿ ವಸ್ತುನಿಷ್ಠ ಹಾಗೂ ಗುಣಮಟ್ಟದ ಮಾಹಿತಿ ಒದಗಿಸಲು ಸಮಾಜದಲ್ಲಿರುವ ಮಾಹಿತಿಯ ಮೂಲಗಳನ್ನು ಗುರುತಿಸುವುದಕ್ಕಾಗಿ ದಕ್ಷ ಕಾರ್ಯ ವಿಧಾನ ಅಭಿವೃದ್ಧಿ ಪಡಿಸಬೇಕಿದೆ ಎಂದು ಹೇಳಿದರು.

ಬಜೆಟ್‌ ಪ್ರಸ್ತಾವಗಳನ್ನು ಪರಿಶೀಲಿಸಲು ಹಾಗೂ ಸದನದ ಇತರೆ ಕಾರ್ಯ ಕಲಾಪಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಪುನಶ್ಚೇತನ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡು ಸದನದ ಕಲಾಪಗಳಿಗೆ ಶಾಸಕರ ಕಡ್ಡಾಯ ಹಾಜರಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next