Advertisement

ಪರ್ಯಾಯ ಶ್ರೀಗಳ ಜತೆ ಸ್ಪೀಕರ್‌ ಪ್ರಶ್ನೋತ್ತರ; ರಾಜಕಾರಣಿಯೊಬ್ಬರ ಫಿಲಾಸಫಿಕಲ್‌ ಜಿಜ್ಞಾಸೆ

01:29 AM Apr 20, 2022 | Team Udayavani |

ಉಡುಪಿ: ಕಾರ್ಯನಿಮಿತ್ತ ಉಡುಪಿಗೆ ಮಂಗಳವಾರ ಬಂದಿದ್ದ ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಒಂದಷ್ಟು ಹೊತ್ತು
ಮಧ್ವಾಚಾರ್ಯರ ಸರ್ವಜ್ಞ ಪೀಠದೆ ದುರು ಒಂಟಿಯಾಗಿ ಕುಳಿತು ಧ್ಯಾನ ಮಾಡಿದರು. ಬಳಿಕ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿ ಚುಟುಕಾಗಿ ದೇವರ ಅರಿವಿನ ಬಗೆಗೆ ಆತ್ಮೀಯ ಸಂವಾದ ನಡೆಸಿದರು.

Advertisement

ಕಾಗೇರಿ ಪ್ರಶ್ನೆಯಿಂದ ಒಂದು ಕ್ಷಣ ಅಚ್ಚರಿಗೊಂಡ ಶ್ರೀಗಳು ನಗುತ್ತಲೇ ಅವರ ಮೇಲೆ ದೃಷ್ಟಿ ಹರಿಸಿದರು. ಬಳಿಕ ಸಂತೋಷದಿಂದಲೇ ಉತ್ತರಿಸಿದರು. ಸಂವಾದ ಹೀಗೆ ಸಾಗಿತ್ತು:

ಕಾಗೇರಿ: ವಿಧಾನಸಭಾಧ್ಯಕ್ಷನಾಗಿ ನಾಡಿನ ಒಳಿತಿಗೆ ಕೆಲಸಮಾಡಲು ಹೆಚ್ಚು ಶಕ್ತಿ ಲಭಿಸುವಂತೆ ಆಶೀರ್ವದಿಸಬೇಕು.
ಸ್ವಾಮೀಜಿ: ಆಶೀರ್ವಾದ ಸದಾ ಇದೆ. ಧರ್ಮ ಮಾರ್ಗ ದಲ್ಲಿ ತಾವು ನಡೆಯುವಾಗ ಸಿಗುವ ಶ್ರೇಯಸ್ಸು ಯಾವಾ ಗಲೂ ರಕ್ಷೆಯಾಗಿರುತ್ತದೆ. ಆ ಮಾರ್ಗ ದಿಂದ ವಿಚಲಿತರಾಗಬೇಡಿ ಅಷ್ಟೆ.

ಕಾಗೇರಿ: ನಮ್ಮೊಳಗಿನ ಭಗವಂತನ ಅರಿಯುವುದೆಂತು?
ಸ್ವಾಮೀಜಿ: ಜಗತ್ತಿನ ಪ್ರತೀ ಕ್ಷಣದ ವಿದ್ಯಮಾನಗಳು ಮತ್ತು ಚರ್ಯೆ ಗಳಲ್ಲಿ ಕಾಣದ ಶಕ್ತಿಯೊಂದರ ಪಾತ್ರ ಇದೆ ಎನ್ನುವ ಪ್ರಜ್ಞೆ ಮತ್ತು ಅದೇ ಶಕ್ತಿನನ್ನೊಳಗೂ ಇದ್ದು ನಿಯಂತ್ರಿಸುತ್ತಿದೆ ಎನ್ನುವ ಅರಿವಿದ್ದರೆ ಒಳ್ಳೆಯದು.

ಕಾಗೇರಿ: ಅದನ್ನೇ ಕೇಳುವುದು ಅದು ಹೇಗೆ ಸಾಧ್ಯ?
ಸ್ವಾಮೀಜಿ: ಯಾವಾಗಲೂ ಅಂತರಂಗದ ಜಾಗೃತಿ ಇದ್ದಾಗ ಆ ಅರಿವಾಗುತ್ತದೆ. ಆಗ ನಮ್ಮ ನಡೆಗಳ ಬಗ್ಗೆಯೂ ಎಚ್ಚರದಿಂದ ಇರುತ್ತೇವೆ. ಆದರೆ ಬಹಿರಂಗದ ಆಕರ್ಷಣೆಗಳಲ್ಲಿ ಹೆಚ್ಚು ವ್ಯಸ್ತರಾಗುತ್ತೇವೆ. ಅಂತರಂಗದ ಜಾಗೃತಿ ನಮ್ಮಲ್ಲಿ ಕ್ಷೀಣವಾದಾಗ ಒಳಗಿರುವ ದೇವರ ಅರಿವು ಅಸಾಧ್ಯ.

Advertisement

ಕಾಗೇರಿ: ಅದಕ್ಕೇನು ಮಾಡಬೇಕು ?
ಸ್ವಾಮೀಜಿ: ಸಂಸ್ಕಾರ ಮತ್ತು ಪ್ರಾರಬ್ಧ ಕರ್ಮಗಳು ಜೀವನವನ್ನು ನಿರ್ಧರಿಸುತ್ತವೆ. ಅಂತರಂಗದ ಬಗೆಗಿನ ಅರಿವಿಗೂ ಇದೇ ಕಾರಣ. ಒಳ್ಳೆಯ ಸಂಸ್ಕಾರ, ಒಳ್ಳೆಯ ಪ್ರಾರಬ್ಧ ಕರ್ಮದ ಫ‌ಲ ಇದ್ದಾಗ ದೇವರನ್ನು ಅರಿಯುವುದಕ್ಕೆ ಬೇಕಾದ ಮನಸ್ಥಿತಿ, ಶ್ರದ್ಧೆ ಮತ್ತು ದೇವರ ಅರಿವಿನೆಡೆಗೆ ನಡೆಯುವ ಸಮಯವನ್ನೂ ಹೊಂದಿಸಿಕೊಳ್ಳಬಹುದು.

ಕಾಗೇರಿ: ವರ್ತಮಾನದ ಪರಿಸ್ಥಿತಿ ಇದಕ್ಕೆ ಕಾರಣವೇ ಸ್ವಾಮೀಜಿ?
ಸ್ವಾಮೀಜಿ: ಖಂಡಿತ ಕಾಲಧರ್ಮ, ಯುಗಧರ್ಮಗಳು ಸಮಾಜವನ್ನು ಆ ಒಳಿತಿನ ಮಾರ್ಗದಲ್ಲಿ ನಮ್ಮನ್ನು ಮನ್ನಡೆಸಲು ಅಡ್ಡಿಯಾಗುತ್ತವೆ. ಆದೆರೆ ಆ ಸವಾಲುಗಳ ನಡುವೆಯೂ ನಾವು ಅಂತರಂಗಶುದ್ಧಿಗೆ ಬೇಕಾದ ಸಾಧನೆಯನ್ನು ಮಾಡಲು ಪ್ರಯತ್ನಿಸ ಬೇಕು. ಆಗ ದೇವರ ಅನುಗ್ರಹವೂ ಸಿದ್ಧಿಸುತ್ತದೆ. ಒಂದಷ್ಟು ವಿಪರೀತಗಳು ಕಣ್ಣಮುಂದೆ ನಡೆಯುತ್ತಿರುವಾಗ ಬೇಸರ ಆಗುತ್ತದೆ. ದೇವರ ದಯೆಯಿಂದ ಎಲ್ಲವೂ ಒಳ್ಳೆಯದಾಗಲಿ.
ಬಳಿಕ ಕಾಗೇರಿಯವರು ಭೋಜನ ಪ್ರಸಾದ ಸ್ವೀಕರಿಸಿ ತೆರಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಸುರೇಶ್‌ ನಾಯಕ್‌, ಕೆ. ಉದಯ್‌ ಕುಮಾರ ಶೆಟ್ಟಿ, ವಿಷ್ಣು ಪಾಡಿಗಾರ್‌, ಶಾಸಕ ಲಾಲಾಜಿ ಆರ್‌. ಮೆಂಡನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next