Advertisement

ದಶಕಗಳ ಕಾಲದ ಹೋರಾಟಕ್ಕೆ ತಾರ್ಕಿಕ ಅಂತ್ಯ

09:52 AM Nov 11, 2019 | Sriram |

ಉಡುಪಿ: ಸುಮಾರು ನಾಲ್ಕು ದಶಕಗಳಿಂದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಸುಪ್ರೀಂಕೋರ್ಟ್‌ ತೀರ್ಪಿ ನಿಂದಾಗಿ ಜೀವನದ ಅತ್ಯುತ್ಕೃಷ್ಟ ಸಂತೃಪ್ತ ಭಾವ ಮೂಡಿದೆ. “ಇದನ್ನು ನೋಡು ತ್ತೇನೋ, ಇಲ್ಲವೋ ಎಂಬ ಆತಂಕ ನನಗಿತ್ತು. ಈಗ ನಿರಾಳ ವಾಗಿದೆ’ ಎಂಬ ಅಭಿಪ್ರಾಯ ವನ್ನು ಅವರು ಹೊರ ಗೆಡಹಿದ್ದಾರೆ.

Advertisement

“ಉದಯವಾಣಿ’ ಜತೆ ಮಾತನಾಡಿದ ಅವರು, ಈ ಇಳಿವಯಸ್ಸಿನಲ್ಲಿಯೂ ತಮ್ಮ, ಸಾಧು, ಸಂತರ ಬೇಡಿಕೆಗಳು ಈಡೇರುವ ಲಕ್ಷಣಗಳು ಗೋಚರಿಸು ತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು.

ಅಯೋಧ್ಯೆ ಚಳವಳಿಗೂ, ತಮಗೂ ಎಷ್ಟು ವರ್ಷಗಳ ನಂಟು?
1980ರಿಂದ ಅಯೋಧ್ಯೆ ರಾಮಮಂದಿರ ಆಂದೋಲನ ಆರಂಭವಾಯಿತು. ಅಂದಿನಿಂದಲೂ ವಿಶ್ವ ಹಿಂದೂ ಪರಿಷತ್ತಿನ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೇನೆ.

ಧರ್ಮಸಂಸದ್‌ ಅಧಿವೇಶನದ ನಿರ್ಣಯಕ್ಕೂ, ಈಗಿನ ತೀರ್ಪಿಗೂ ನಿಮ್ಮ ಪ್ರತಿಕ್ರಿಯೆ ಏನು?
1985ರಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಎರಡನೆಯ ಧರ್ಮಸಂಸದ್‌ ಅಧಿವೇಶನ ನಡೆದು, ಆಗ ರಾಮಮಂದಿರಕ್ಕಿದ್ದ ಬೀಗವನ್ನು ತೆರವುಗೊಳಿಸಲು “ತಾಲಾ ಖೋಲೋ’ ನಿರ್ಣಯವನ್ನು ತಳೆದವು. ಆಗ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿಯವರು ಮಂದಿರದ ಬೀಗವನ್ನು ತೆಗೆಸಿ, ಪೂಜೆಗೆ ಅನುಕೂಲ ಮಾಡಿಕೊಟ್ಟರು. 2017ರಲ್ಲಿ ನಮ್ಮ ಐದನೆಯ ಪರ್ಯಾಯದಲ್ಲಿ ನಡೆದ ಧರ್ಮಸಂಸದ್‌ ಅಧಿವೇಶನದಲ್ಲಿ ರಾಮಮಂದಿರ ನಿರ್ಮಿಸಲು ಒತ್ತಾಯಿಸಿದ್ದೆವು. ಈಗ ಅದಕ್ಕೆಲ್ಲ ತಾರ್ಕಿಕ ಅಂತ್ಯ ಸಿಕ್ಕಿದೆ.

ರಾಮಮಂದಿರ ನಿರ್ಮಾಣಕ್ಕೆ ನಡೆದ ಶಂಕುಸ್ಥಾಪನೆ, ಕರ ಸೇವೆಯ ಸಂದರ್ಭದ ದಿನಗಳ ಕುರಿತು…
ಮುಲಾಯಂ ಸಿಂಗ್‌ ಯಾದವ್‌ ಅವರು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಡೆದ ಆಂದೋಲನದಲ್ಲಿ ನಾವು ಮತ್ತು ಪಲಿಮಾರು, ಅದಮಾರು, ಸುಬ್ರಹ್ಮಣ್ಯ ಮೊದಲಾದ ಮಠಾಧೀಶರು ಪಾಲ್ಗೊಂಡಿದ್ದೆವು. ಆಗ ಅಲಹಾಬಾದ್‌ ಸಮೀಪ, ಫಾರೂಖಾಬಾದ್‌ ಬಳಿ ಗೃಹ ಬಂಧನದಲ್ಲಿರಿಸಿದ್ದರು. ಅದು ಕಾರಾಗೃಹವಲ್ಲ. ಆಗಿನ ರಾಷ್ಟ್ರಪತಿಯಾಗಿದ್ದ ಆರ್‌.ವೆಂಕಟರಾಮನ್‌ ಅವರಿಗೆ ಪತ್ರ ಬರೆದಾಗ ಬಿಡುಗಡೆಗೊಳಿಸಲು ಆದೇಶಿಸಿದರು. ಬಿಡುಗಡೆಗೊಂಡ ಬಳಿಕ ಅಯೋಧ್ಯೆಗೆ ತೆರಳಿ ದರ್ಶನ ಮಾಡಿಕೊಂಡು ಬಂದೆವು. ಪ್ರಧಾನಿ ಪಿ.ವಿ.ನರಸಿಂಹ ರಾವ್‌ ಅವರ ಕಾಲದಲ್ಲಿ ಮಾತುಕತೆ ನಡೆಯಿತು. ಇದಕ್ಕೂ ಮುನ್ನ ವಿ.ಪಿ.ಸಿಂಗ್‌ ಕಾಲದಲ್ಲಿಯೂ ಚರ್ಚೆ ನಡೆದಿತ್ತು. ಸಂಧಾನ ವಿಫ‌ಲವಾಯಿತು. 1992ರಲ್ಲಿ ನಡೆದ ಕರಸೇವೆಯಲ್ಲಿ ವಿವಾದಿತ ಕಟ್ಟಡ ಕೆಡಹುವಾಗ ತಡೆದಿದ್ದೆ. ಅದು ಸಾಧ್ಯವಾಗಲಿಲ್ಲ. ಮರುದಿನ ನಾನೇ ತರಾತುರಿಯಲ್ಲಿ ಪ್ರತಿಷ್ಠಾಪನೆ ನಡೆಸಬೇಕಾಯಿತು. ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭದಲ್ಲಿಯೂ ಪಾಲ್ಗೊಂಡಿದ್ದೆ. ಆಗ ಅಯೋಧ್ಯೆಯ ಓರ್ವ ದಲಿತರಿಂದ ಶಿಲಾನ್ಯಾಸ ನಡೆಸಲಾಗಿತ್ತು.

Advertisement

ಈ ತೀರ್ಪನ್ನು ನಿರೀಕ್ಷಿಸಿದ್ದಿರೇ? ತೀರ್ಪು ಸಂತೃಪ್ತಿ ಕೊಟ್ಟಿದೆಯೇ?
ಹೌದು, ಈ ತೀರ್ಪನ್ನು ನಿರೀಕ್ಷಿಸಿದ್ದೆವು, ಅದು ಸಂತೃಪ್ತಿಯನ್ನೂ ಕೊಟ್ಟಿದೆ. ನ್ಯಾಯಾಲಯ ಪುರಾತತ್ವ ಇಲಾಖೆಯ ಸಮೀಕ್ಷೆಯನ್ನು ಗಮನಿಸಿದೆ. ರಾಮಜನ್ಮ ಭೂಮಿ ಟ್ರಸ್ಟ್‌ಗೆ ವಿವಾದಿತ ಭೂಮಿಯನ್ನು ಹಸ್ತಾಂತರ ಮಾಡಲು ಸೂಚಿಸಿದೆ. ಏತನ್ಮಧ್ಯೆ ಮುಸ್ಲಿಮರಿಗೂ ಮಸೀದಿಯನ್ನು ನಿರ್ಮಿಸಿಕೊಳ್ಳಲು ಜಾಗವನ್ನು ಕೊಟ್ಟಿದೆ. ಹೀಗಾಗಿ, ಇದು ಸ್ವಾಗತಾರ್ಹ ತೀರ್ಪು.

ತಾವು ರಾಮಜನ್ಮಭೂಮಿ ಟ್ರಸ್ಟ್‌ನ ಟ್ರಸ್ಟಿಯೇ?
ಹೌದು. ಹಿಂದೆ ಶ್ರೀ ಮಹಂತ ಅವೈದ್ಯನಾಥರು ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ನಂತರ ಮಹಂತ ಶ್ರೀ ನೃತ್ಯಗೋಪಾಲದಾಸರು ಅಧ್ಯಕ್ಷರಾಗಿದ್ದಾರೆ. ಇವರಿಬ್ಬರೂ 1985ರ ಉಡುಪಿ ಧರ್ಮಸಂಸದ್‌ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ನೃತ್ಯಗೋಪಾಲದಾಸರಿಗೆ 2017ರ ಧರ್ಮಸಂಸದ್‌ಗೆ ವಯಸ್ಸಿನ ಕಾರಣದಿಂದ ಬರಲಾಗ ಲಿಲ್ಲ. ಆದರೆ, ನಾವು ಅವರ ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡಿ ದ್ದೆವು. ಈಗ ಪುನಃ ಟ್ರಸ್ಟ್‌ ಪುನಾರಚಿಸಲಿದ್ದಾರೆಂದು ತಿಳಿದು ಬಂದಿದೆ.

ಮಂದಿರ ನಿರ್ಮಿಸುವ ಹೊಣೆಯನ್ನು ಸರಕಾರಕ್ಕೆ ವಹಿಸಿಕೊಟ್ಟ ಕುರಿತು ಆಕ್ಷೇಪವಿದೆಯೆ?
ಇಲ್ಲ. ಸರಕಾರಕ್ಕೂ ಹೊಣೆಗಾರಿಕೆ ಬಂದಂತೆ ಆಗಿದೆ. ಸದ್ಯವೇ ಸಾಧುಸಂತರು ಕಲೆತು ನಿರ್ಣಯ ತಳೆಯಲಿದ್ದಾರೆ.

ತೀರ್ಪಿನ ಬಳಿಕ ಜನತೆಗೆ ಸಂದೇಶವೇನು?
ತೀರ್ಪನ್ನು ಹಿಂದೂಗಳೂ, ಮುಸ್ಲಿಮರೂ ಒಪ್ಪಿಕೊಂಡು ಸ್ವೀಕರಿಸಬೇಕು. ಹಿಂದೂಗಳಿಗೆ ಜನ್ಮಭೂಮಿ ಮುಖ್ಯ. ಮುಸ್ಲಿಮರಿಗೆ ಜಾಗ ಮುಖ್ಯವಲ್ಲ. ಹೀಗಾಗಿ, ಅವರಿಗೆ ಜಾಗವನ್ನು ಕೊಡುವ ತೀರ್ಪು ನೀಡಲಾಗಿದೆ. ಆ ಜಾಗದ ಬಗ್ಗೆ ಮುಂದೆ ನಿರ್ಣಯ ತಳೆಯಬಹುದು. ಇಬ್ಬರೂ ತೀರ್ಪನ್ನು ಸೌಹಾರ್ದದಿಂದ ಸ್ವೀಕರಿಸಿ, ಸಹಬಾಳ್ವೆ ನಡೆಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.

ಅಯೋಧ್ಯೆಗೆ ಸದ್ಯ ಹೋಗುತ್ತೀರಾ?
ಸದ್ಯ ಹೋಗಬೇಕಾದ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಹೋಗುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next