Advertisement
ಯಲಹಂಕದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುವಂತೆ ಮಾಡುವ ದೃಷ್ಟಿಯಿಂದ ವಿಶ್ವವಾಣಿ ಫೌಂಡೇಷನ್ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ನಿಯೋಜನೆ ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಕೊಲಂಬಿಯಾ ಏಷ್ಯಾ ಸೇರಿದಂತೆ ಇನ್ನಿತರೆ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ವೈದ್ಯರು ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿದ್ದಾರೆ.
Related Articles
Advertisement
ವ್ಹೀಲ್ ಅಂಡ್ ಆಕ್ಸೆಲ್ ಮನವೊಲಿಕೆ ಯಶಸ್ವಿ
ಇದೇ ವೇಳೆ, ಕ್ಷೇತ್ರದ ಯಾವುದೇ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಮ್ಲಜನಕವನ್ನು ವಿತರಿಸುವಂತೆ ವ್ಹೀಲ್ ಅಂಡ್ ಆಕ್ಸೆಲ್ ಕಂಪನಿಯೊಂದಿಗೆ ನಡೆಸಿದ ಮಾತುಕತೆ ಸಫಲವಾಗಿದೆ. ಇದರನ್ವಯ ಕಂಪನಿಯು ಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಉಚಿತವಾಗಿ ಆಮ್ಲಜನಕವನ್ನು ಪೂರೈಕೆ ಮಾಡುವ ಭರವಸೆ ನೀಡಿದೆ ಮತ್ತು ಪೂರೈಕೆಗೆ ಬೇಕಾಗುವ ಕನ್ವರ್ಟರ್ ವಾಹನವನ್ನು ತನ್ನದೇ ಖರ್ಚಿನಲ್ಲಿ ಖರೀದಿಸಲು ನಿರ್ಧರಿಸಿದೆ. ಮೂರ್ನಾಲ್ಕು ದಿನಗಳಲ್ಲಿ ಆಸ್ಪತ್ರೆಗಳಿಗೆ ಉಚಿತವಾಗಿ ಆಮ್ಲಜನಕವನ್ನು ಪೂರೈಕೆ ಮಾಡಲಿದೆ ಎಂದು ವಿಶ್ವನಾಥ್ ಹೇಳಿದರು.
ಅದೇ ರೀತಿ, ಫೆಡರಲ್ ಮೊಘಲ್ ಸಂಸ್ಥೆಯೊಂದಿಗೂ ಮಾತುಕತೆ ನಡೆಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಗೆ ಅಗತ್ಯವಿರುವ ಸಲಕರಣೆಗಳನ್ನು ಉಚಿತವಾಗಿ ಒದಗಿಸುವಂತೆ ಮನವಿ ಮಾಡಲಾಗಿದ್ದು, ಸಂಸ್ಥೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ 7 ವೆಂಟಿಲೇಟರ್ ಗಳನ್ನು ಅಳವಡಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಇನ್ನೂ ಮೂರು ವೆಂಟಿಲೇಟರ್ ಗಳನ್ನು ಅಳವಡಿಸಿ, ಇಂಟೆನ್ಸಿವ್ ಕೇರ್ ಯೂನಿಟ್ ಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಸರ್ಕಾರದಿಂದ ಸೋಂಕಿತರಿಗೆ ಔಷಧವನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಜ್ ಭವನದಲ್ಲಿ 450 ಹಾಸಿಗೆ ವ್ಯವಸ್ಥೆ
ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಹಜ್ ಭವನವನ್ನು ಕೋವಿಡ್-19 ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ 450 ಜನರಿಗೆ ಏಕಕಾಲಕ್ಕೆ ಚಿಕಿತ್ಸೆ ನೀಡಲು ಹಾಸಿಗೆ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು.
ಲಸಿಕಾ ಕೇಂದ್ರಗಳಲ್ಲಿ ಬಿಜೆಪಿ ಸ್ವಯಂ ಸೇವಕರ ಸೇವೆ
ಇನ್ನು, ಕೋವಿಡ್ ಲಸಿಕೆ ನೀಡಲಾಗುತ್ತಿರುವ ಕೇಂದ್ರಗಳಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಸಾಮಾಜಿಕ ಅಂತರ ವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಭಾರತೀಯ ಜನತಾ ಪಕ್ಷದ ಸ್ವಯಂ ಸೇವಕರು ಮಾಡುತ್ತಿದ್ದಾರೆ.
ಕೋವಿಡ್ ಪಾಸಿಟಿವ್ ಬಂದ ತಕ್ಷಣ ಯಾರೂ ದೃತಿಗೆಡಬಾರದು. ಧೈರ್ಯದಿಂದ ಇರಬೇಕು ಮತ್ತು ಅಗತ್ಯ ಶಿಷ್ಠಾಚಾರಗಳನ್ನು ಪಾಲಿಸಬೇಕು. ಕೋವಿಡ್ ಅನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಉಲ್ಲಂಘನೆ ಮಾಡಬಾರದು ಮತ್ತು ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸುವುದು, ಆಗಿಂದಾಗ್ಗೆ ಕೈ ತೊಳೆದುಕೊಳ್ಳುವುದನ್ನು ಮರೆಯಬಾರದು ಎಂದು ವಿಶ್ವನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.