ಹುಬ್ಬಳ್ಳಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಅವರು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳ ಮಾಹಿತಿ ತಿಳಿದು ಹೇಳಿಕೆ ನೀಡುವುದು ಒಳಿತು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಉತ್ತಮವಾಗಿ ಕಾರ್ಯ ಮಾಡುತ್ತಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆ ನೀಡುವ ಮೂಲಕ ಕೆಲ ಕಾಂಗ್ರೆಸ್ ಶಾಸಕರು ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಗೊಂದಲ ಹೇಳಿಕೆ ನೀಡದಂತೆ ಶಾಸಕರಿಗೆ ಸೂಚಿಸಲಾಗುವುದು. ಈ ನಿಟ್ಟಿನಲ್ಲಿ ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಸ್ಪಷ್ಟನೆ ನೀಡಿದ್ದು, 5 ವರ್ಷಗಳ ಕಾಲ ಸಮ್ಮಿಶ್ರ ಸರಕಾರ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಜೆಡಿಎಸ್ ಮುಖಂಡರೇ ಆಗಲಿ, ಕಾಂಗ್ರೆಸ್ ಮುಖಂಡರೇ ಆಗಲಿ, ಮೈತ್ರಿ ಸರಕಾರಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಸಮ್ಮಿಶ್ರ ಸರಕಾರದ ಜನಪರ ಯೋಜನೆಗಳು, ಪಕ್ಷದ ಮುಖಂಡರ ವ್ಯಾಪಕ ಪ್ರಚಾರ ಹಾಗೂ ಬಡವರ ಧ್ವನಿಯಾಗಿದ್ದ ಸಿ.ಎಸ್. ಶಿವಳ್ಳಿ ಬಗೆಗಿನ ಸಹಾನುಭೂತಿ ಅಲೆಯಿಂದ ಕುಂದಗೋಳ ಉಪ ಚುನಾವಣೆಯಲ್ಲಿ ಕುಸುಮಾವತಿ ಗೆಲುವು ಸಾಧಿಸುವುದು ಖಚಿತ. ಸಮ್ಮಿಶ್ರ ಸರಕಾರದ ಸ್ಥಿರತೆಯ ಕಾರಣದಿಂದ ಈ ಗೆಲುವು ಅವಶ್ಯ ಎಂದು ನುಡಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವ ಚಿಂತನೆ ನಡೆದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನ್ನ ಜವಾಬ್ದಾರಿ ಕಡಿಮೆ ಮಾಡುವಂತೆ ನಾನೇ ಮುಖಂಡರಿಗೆ ತಿಳಿಸಿದ್ದೇನೆ. ಉತ್ತರ ಕನ್ನಡದ ಜವಾಬ್ದಾರಿಯೊಂದಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಹೊಣೆಯೂ ನನ್ನ ಮೇಲಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೆಲವೊಮ್ಮೆ ಮತ್ತೆ ಅಧಿಕಾರಕ್ಕೇರಲು ಸಾಧ್ಯವಾಗಲ್ಲ. ಸಿದ್ದರಾಮಯ್ಯ ಜನಪರ ಕೆಲಸಗಳನ್ನು ಮಾಡಿದರೂ ನಮಗೆ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸೀಟುಗಳು ಸಿಗಲಿಲ್ಲ. 2004ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಆಗ ಕೂಡ ನಮ್ಮ ಪಕ್ಷ ನಿರೀಕ್ಷಿಸಿದಷ್ಟು ಸೀಟುಗಳನ್ನು ಗಳಿಸಲು ಸಾಧ್ಯವಾಗಲಿಲ್ಲ ಎಂದರು.
Related Articles
Advertisement