Advertisement

ಮಳೆ ಹಾನಿ ಪ್ರದೇಶಗಳಿಗೆ ವಿಶ್ವನಾಥ್‌ ಭೇಟಿ

09:35 PM Apr 24, 2019 | Lakshmi GovindaRaju |

ಹುಣಸೂರು: ಬಿರುಗಾಳಿ ಮಳೆಗೆ ಹಾನಿಗೀಡಾದ ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ, ಶಾಸಕ ಎಚ್‌.ವಿಶ್ವನಾಥ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕಲ್ಲಹಳ್ಳಿ, ಹುಣಸೇಗಾಲ, ಆಡಿಗನಹಳ್ಳಿ, ತಟ್ಟೆಕೆರೆ, ಮುದಗನೂರು, ಹನಗೋಡು ಮತ್ತಿತರ ಕಡೆ ಪರಿಶೀಲಿಸಿದರು. ಕಲ್ಲಹಳ್ಳಿಯಲ್ಲಿ ಗುಡಿಸಿಲು ಮೇಲ್ಛಾವಣಿ ಕುಸಿದು ಮೃತಪಟ್ಟ ವೃದ್ಧೆ ದೊಡ್ಡತಾಯಮ್ಮರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ರಾಷ್ಟ್ರೀಯ ಪ್ರಕೃತಿ ವಿಕೋಪ ಯೋಜನೆಯಡಿ ತಕ್ಷಣವೇ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿಗಳ ನಿಧಿಯಿಂದ ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಆಡಿಗನಹಳ್ಳಿಯಲ್ಲಿ ಡಿ.ದೇವರಾಜ ಅರಸ ಅವರ ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದ ವೃದ್ಧೆ ದೊಡ್ಡಮ್ಮತಾಯಿ ಮೇಲ್ಛಾವಣಿ ಕುಸಿದ ಪರಿಣಾಮ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಮೃತರಅಂತ್ಯಸಂಸ್ಕಾರದಲ್ಲಿ ಶಾಸಕ ಪಾಲ್ಗೊಂಡರು. ಆಡಿಗನಹಳ್ಳಿಯಲ್ಲಿ ಮನೆಯ ಮೇಲೆ ತೆಂಗಿನಮರವೊಂದು ಬಿದ್ದಿರುವುದನ್ನೂ ಗಮನಿಸಿದರು.

ನಂತರ ಹುಣಸೇಗಾಲ ಹಾಗೂ ಆಡಿಗನಹಳ್ಳಿಗೆ ತೆರಳಿ ಹಾನಿ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಮುದಗನೂರು, ಕೊಳವಿಗೆ, ಹನಗೋಡು ಇತರೆ ಗ್ರಾಮಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.

ಹೆಚ್ಚಿನ ಪರಿಹಾರಕ್ಕೆ ಕ್ರಮ: ನಮ್ಮದೇ ಸರ್ಕಾರವಿದೆ. ಅಧಿಕಾರಿಗಳು ನಷ್ಟದ ಅಂದಾಜಿನ ವರದಿಯನ್ನು ತಕ್ಷಣವೇ ಸಲ್ಲಿಸಬೇಕು. ತಾವು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ಕೊಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

Advertisement

ಹನಗೋಡು ಜಿಪಂ ಸದಸ್ಯ ಕಟ್ಟನಾಯಕ ಮಾತನಾಡಿ, ಹನಗೋಡು ನಾಡ ಕಚೇರಿಯ ಆರ್‌.ಐ.ರಾಜ್‌ಕುಮಾರ್‌, ಸೆಸ್ಕ್ ಇಂಜಿನಿಯರ್‌ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಬಸವರಾಜು, ಸೆಸ್ಕ್ ಎಇಇ ಸಿದ್ದಪ್ಪ, ಕೃಷಿ ಹಾಗೂ ತೋಟಗಾರಿಗೆ ಇಲಾಖೆ ಅಧಿಕಾರಿಗಳು, ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ತಮ್ಮೇಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಹರಳಹಳ್ಳಿ ಮಹದೇವೇಗೌಡ, ಪಿಡಿಒ ಅರುಣ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next