Advertisement

ಕುತೂಹಲ ಮೂಡಿಸಿದ ವಿಶ್ವನಾಥ್‌-ಪ್ರಸಾದ್‌ ಭೇಟಿ

11:30 PM May 08, 2019 | Lakshmi GovindaRaj |

ಬೆಂಗಳೂರು/ಮೈಸೂರು: ಪ್ರಸ್ತುತ ರಾಜಕೀಯವಾಗಿ ಸಿದ್ದರಾಮಯ್ಯ ಅವರ ಸಮಾನ ವಿರೋಧಿಗಳಾದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಭೇಟಿಯಾಗಿ, ಮಾತುಕತೆ ನಡೆಸಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಒಂದು ಕಾಲಕ್ಕೆ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿದ್ದ ಈ ಇಬ್ಬರೂ ನಾಯಕರು ಈಗ ಸಿದ್ದರಾಮಯ್ಯನವರ ಪ್ರಬಲ ವಿರೋಧಿಗಳಾಗಿದ್ದಾರೆ. ಇದೀಗ ರಾಜಕೀಯ ಪಕ್ಷಗಳ ನಾಯಕರು ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಬರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರೆ,

ಸಿದ್ದರಾಮಯ್ಯ ಆಪ್ತ ಬಳಗದ ಕಾಂಗ್ರೆಸ್‌ ಶಾಸಕರು ಫ‌ಲಿತಾಂಶಕ್ಕೂ ಮುನ್ನವೇ ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಕೂಗೆಬ್ಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆ, ಬೇರೆ ಪಕ್ಷಗಳಲ್ಲಿದ್ದರೂ ಸಿದ್ದರಾಮಯ್ಯ ಅವರ ಸಮಾನ ವಿರೋಧಿಗಳಾಗಿರುವ ಈ ಇಬ್ಬರೂ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಸಹಜ ಭೇಟಿ, ಉಭಯ ಕುಶಲೋಪರಿ ಚರ್ಚೆ: ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸಪ್ರಸಾದ್‌, “ನಾನು ಹಾಗೂ ವಿಶ್ವನಾಥ್‌ ಅವರು 45 ವರ್ಷದಿಂದ ಸ್ನೇಹಿತರು. ರಾಜಕೀಯದಲ್ಲಿ ಬೇರೆ ಇದ್ದರೂ ನಮ್ಮ ನಡುವಿನ ವಿಶ್ವಾಸಕ್ಕೆ ಧಕ್ಕೆಯಾಗಿಲ್ಲ. ಚುನಾವಣಾ ಒತ್ತಡದಿಂದಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸ್ನೇಹಮಯವಾಗಿ ಭೇಟಿಯಾಗಿದ್ದೇವೆ.

ಸಹಜವಾಗಿ ರಾಜಕೀಯ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ’ ಎಂದರು.
ಈ ಮಧ್ಯೆ, ಬೆಂಗಳೂರಿನಲ್ಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಎಚ್‌.ವಿಶ್ವನಾಥ್‌, ನಾವಿಬ್ಬರೂ ಸ್ನೇಹಿತರು. ಉಭಯ ಕುಶಲೋಪರಿ ವಿಚಾರಿಸಲು ಭೇಟಿ ಮಾಡಿದ್ದೆವು. ಸಹಜವಾಗಿ ರಾಜಕೀಯವೂ ಚರ್ಚೆಯಾಯಿತು. ಚಾಮರಾಜನಗರದಲ್ಲಿ ಅವರು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ, ಮತದಾರರ ಮನದಾಳ ಯಾರಿಗೆ ಗೊತ್ತು ಎಂದರು.

Advertisement

ಹಿಂದಿನ ಚುನಾವಣೆಯಲ್ಲಿ ನಾವು ಒಂದಾಗಿದ್ದೆವು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಪ್ರಯತ್ನಿಸಿದ್ದೆವು. ಅದೆಲ್ಲಾ ಮುಗಿದ ಅಧ್ಯಾಯ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌, ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಇದರಿಂದಲೇ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಕಾರಣವಾಯಿತು. ಅದಕ್ಕೆ ಜೆಡಿಎಸ್‌ ಕಾರಣವಲ್ಲ ಎಂದರು. ಕಾಂಗ್ರೆಸ್‌ ಜತೆಗಿನ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಪರೂಪಕ್ಕೆ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ, ಬಿಜೆಪಿಯವರು ದೇವಸ್ಥಾನದ ಗಿರಾಕಿಗಳು. ದಿನ ಬೆಳಗಾದ್ರೆ ದೇವಸ್ಥಾನಕ್ಕೆ ಹೋಗ್ತಾರೆ. ರೆಸಾರ್ಟ್‌ನಲ್ಲೂ ದೇವಸ್ಥಾನಗಳಿವೆ. ಪ್ರಹ್ಲಾದ, ಎಲ್ಲೆಲ್ಲೂ ನಾರಾಯಣನಿದ್ದಾನೆ ಎಂದು ಹೇಳಿದಂತೆ ರೆಸಾರ್ಟ್‌ನಲ್ಲೂ ದೇವರಿದ್ದಾನೆ.
-ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next