Advertisement

ಅಂದು ರಸ್ತೆಯಲ್ಲಿ, ಇಂದು ಟ್ರ್ಯಾಕ್‌ನಲ್ಲಿ

03:05 AM Nov 18, 2017 | |

ಅಪ್ಪ ಓಡು ಅಂತಾರೆ, ಮಗ ಓಡುತ್ತಾನೆ, ಎಡವಿ ಬೀಳುತ್ತಾನೆ.ಬಿದ್ದು ಗಾಯವಾದಾಗ ಮಗನಿಗೆ ಗಾಯವಾಯ್ತು ಅನ್ನುವ ನೋವು ಮನಸ್ಸಲ್ಲಿ ಇದ್ದರೂ ಇದೆಲ್ಲ ಏನೂ ಅಲ್ಲ ಕಣೋ, ಚಿಕ್ಕ ಪುಟ್ಟ ಗಾಯಕ್ಕೆಲ್ಲ ಹೆದರಬಾರದು ನೀನು ಇನ್ನೂ ಓಡಬೇಕು, ಸಾಧಿಸುವುದು ತುಂಬಾ ಇದೆ… ಇಂತಹ ಮಾತುಗಳಿಂದ ಮಗನನ್ನು ತಂದೆ ಪ್ರೋತ್ಸಾಹಿಸುತ್ತಾರೆ. ಹೀಗೆ ತಂದೆಯ ಸಲಹೆ, ಸೂಚನೆ, ಪ್ರೋತ್ಸಾಹದ ಮಾತು ಕೇಳಿಯೇ  ಟ್ರ್ಯಾಕ್‌ಗೆ ಇಳಿದ ವಿಶ್ವಂಭರ ಕೊಲೇಕರ್‌ ಇಲ್ಲಿಯವರೆಗೆ 12 ರಾಷ್ಟ್ರೀಯ ಪದಕ, 25 ರಾಜ್ಯ ಪದಕಗಳನ್ನು ಗೆದ್ದಿದ್ದಾರೆ. ಸಾಧನೆಯ ಛಲ ಹೊತ್ತ ಈ ಕನ್ನಡಿಗನ ಬಗ್ಗೆ ಒಂದು ಕಿರು ಪರಿಚಯ.

Advertisement

ಕರ್ನಾಟಕದ  ಗಡಿಯಲ್ಲಿರುವ ಖಾನಾಪುರ ತಾಲೂಕಿನ ಗರ್ಲಗುಂಜಿ ಊರಿನ ಲಕ್ಷ್ಮಣ ಕೊಲೇಕರ್‌ ಮತ್ತು ಮಹಾದೇವಿ ಕೊಲೇಕರ್‌ ದಂಪತಿಯ ಮೂರನೇ ಮಗನೇ ವಿಶ್ವಂಭರ. ಲಕ್ಷ್ಮಣ ಕೊಲೇಕರ್‌ ರಾಷ್ಟ್ರೀಯ ತಂಡದ ಮಾಜಿ ಕಬಡ್ಡಿ ಆಟಗಾರ. ಆದರೆ ಖೋಖೋ ಕೋಚ್‌ ಆಗಿ ಖ್ಯಾತರಾದವರು. ಇವರ ಮಾರ್ಗದರ್ಶನ ಪಡೆದ 12ಕ್ಕೂ ಅಧಿಕ ಕ್ರೀಡಾಪಟುಗಳು ರಾಷ್ಟ್ರೀಯ ಖೋಖೋ ತಂಡವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಮಗನನ್ನೂ ಖೋಖೋ ಆಟಗಾರನಾಗಿ ಮಾಡಬೇಕು ಅನ್ನುವ ಉದ್ದೇಶದಿಂದಲೇ ತರಬೇತು ನೀಡುತ್ತಿದ್ದರು. ಆದರೆ ವಿಶ್ವಂಭರ ಖೋಖೋ ಆಡುವಾಗ ವೇಗವಾಗಿ ತುಂಬಾ ವೇಗವಾಗಿ ಓಡುವುದನ್ನು ಗಮನಿಸಿ, ಮಗನನ್ನು ಓಟಗಾರನಾಗಿ ಮಾಡಲು ನಿರ್ಧರಿಸಿದರು. ಟ್ರ್ಯಾಕ್‌ಗೆ ಇಳಿಸಿಯೇ ಬಿಟ್ಟರು.

ರಸ್ತೆಯಲ್ಲಿಯೇ ಓಡಿಸುತ್ತಿದ್ದರು!
ಮಗನನ್ನು ಕ್ರೀಡಾಪಟು ಮಾಡಬೇಕು ಅನ್ನುವುದೇ ತಂದೆಯ ದೊಡ್ಡ ಕನಸಾಗಿತ್ತು. ಹೀಗಾಗಿ ಭಾನುವಾರ ಸೇರಿದಂತೆ ರಜೆದಿನಗಳಲ್ಲಿ ತಂದೆ ಮಗ ರಸ್ತೆಗೆ ಇಳಿಯುತ್ತಿದ್ದರು. ರಸ್ತೆಯಲ್ಲಿಯೇ ಓಡಲು ಬಿಡುತ್ತಿದ್ದರು. ಗುರಿ ತಲುಪಿದ ಸಮಯವನ್ನು ಮಾರ್ಕ್‌ ಮಾಡಿಕೊಂಡು ಅದನ್ನು ಮಗನಿಗೂ ತೋರಿಸಿ ಮುಂದಿನ ವಾರ ಇನ್ನೂ ವೇಗವಾಗಿ ಓಡಬೇಕು ಅಂತ ಪ್ರೋತ್ಸಾಹಿಸುತ್ತಿದ್ದರು. ಓಡುವಾಗ ಬಿದ್ದು ಗಾಯವಾಗಿದ್ದರೆ ಸಂತೈಸುತ್ತಿದ್ದರು. 

ಅಕ್ಕನೇ ಸ್ಫೂರ್ತಿ
ಇಂದು ಕ್ರಿಕೆಟ್‌ ಆಡುವವರಿಗೆ ಸಚಿನ್‌ ತಂಡುಲ್ಕರ್‌, ಫ‌ುಟ್ಬಾಲ್‌ ಆಡುವವರಿಗೆ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಲಿಯೊನೆಲ್‌ ಮೆಸ್ಸಿ, ಟೆನಿಸ್‌ ಆಡುವವರಿಗೆ ರೋಜರ್‌ ಫೆಡರರ್‌….ಹೇಗೋ ಹಾಗೇ ವಿಶ್ವಂಭರನಿಗೆ ಸ್ವಂತ ಅಕ್ಕ ಜ್ಯೋತಿ ಅವರೇ ಸ್ಫೂರ್ತಿ. ಒಂದು ಕಡೆ ವಿಶ್ವಂಭರ ಅಪ್ಪನಿಂದ ರನ್ನಿಂಗ್‌ ತರಬೇತಿ ಪಡೆಯುತ್ತಿದ್ದರೆ, ಜ್ಯೋತಿ 800 ಮೀ. ಓಟದಲ್ಲಿ ಅದಾಗಲೇ ರಾಷ್ಟ್ರೀಯ ಪದಕ ಗೆದ್ದಾಗಿತ್ತು. ಅಕ್ಕನನ್ನು ಜನ ಗುರುತಿಸುತ್ತಿದ್ದರು. ಗೌರವ ಕೊಡುತ್ತಿದ್ದರು. ಹೀಗಾಗಿ ತಾನೂ ಅಥ್ಲೀಟ್‌ ಆಗಬೇಕು ಏನಾದರೂ ಸಾಧನೆ ಮಾಡಬೇಕು ಅನ್ನುವ ಛಲ ಈ ಹುಡುಗನಿಗೂ ಜತೆಯಾಯಿತು. ವಿಶ್ವಂಭರನ ಇಂದಿನ ಸಾಧನೆಗೆ ಅವನ ಅಕ್ಕನೇ ಸ್ಫೂರ್ತಿಯಾಗಿದ್ದಾರೆ.

ಎರಡು ದಾಖಲೆ
14 ವರ್ಷದೊಳಗಿನ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ವಿಶ್ವಂಭರ, 800 ಮೀ. ಮತ್ತು 1500 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಎರಡೂ ವಿಭಾಗದಲ್ಲಿ ರಾಜ್ಯ ದಾಖಲೆಯನ್ನು ನಿರ್ಮಿಸಿದ್ದಾರೆ. 800 ಮೀ. ಓಟವನ್ನು 1.47 ಸೆಕಂಡ್‌ನ‌ಲ್ಲಿ ಗುರಿ ಮುಟ್ಟಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಅದೇ ರೀತಿ 1500 ಮೀ. ಓಟವನ್ನು 3.45 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದಾರೆ. ಸುಮಾರು 30 ವರ್ಷದ ಹಿಂದಿನ ದಾಖಲೆಯನ್ನು ಮುರಿದ ಖ್ಯಾತಿ ವಿಶ್ವಂಭರ ಅವರದಾಗಿದೆ.

Advertisement

ಕೆಲಸ ಸಿಗುವವರೆಗೂ ಸಂಕಷ್ಟ
ತಂದೆ ಲಕ್ಷ್ಮಣ್‌ ಶಾಲೆಯೊಂದರಲ್ಲಿ ಕ್ಲರ್ಕ್‌ ಆಗಿರುವುದರಿಂದ ಹೆಚ್ಚಿನ ಕಷ್ಟಗಳು ಎದುರಾಗದಿದ್ದರೂ ಕಲವೊಮ್ಮೆ ಹಣಕ್ಕಾಗಿ ಪರದಾಡಿದ ಸ್ಥಿತಿಯೂ ಇದೆ. ಯಾಕೆಂದರೆ ಎಲ್ಲಾ ಸಮಯದಲ್ಲಿಯೂ ತಂದೆಯಿಂದ ಹಣವನ್ನು ಕೇಳಲಾಗುತ್ತಿರಲಿಲ್ಲ. ಟೂರ್ನಿಗಳಿಗೆ ಹೋದಾಗ 

ಹಿತ ಮಿತ ಖರ್ಚು. 
ಆದರೆ 2011ರಲ್ಲಿ ರೈಲ್ವೇಸ್‌ನಲ್ಲಿ ಉದ್ಯೋಗ ಸಿಕ್ಕಿತು. ಹೀಗಾಗಿ ಜೀವನ ಮಟ್ಟ ಸುಧಾರಿಸಿದೆ ಎನ್ನುತ್ತಾರೆ ವಿಶ್ವಂಭರ.

ನೋವು ನೀಡಿದ 2015
ಕನ್ನಡಿಗ ವಿಶ್ವಂಭರನಿಗೆ ನೋವು ನೀಡಿದ್ದು 2015. ಆ ವರ್ಷ ನಡೆದ ಎಲ್ಲಾ ರಾಷ್ಟ್ರೀಯ ಕ್ರೀಡೆಯ 800 ಮೀ. ಮತ್ತು 1500 ಮೀ. ಓಟದಲ್ಲಿಯೂ 4ನೇ ಸ್ಥಾನ. ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿದೆ. ಎಷ್ಟೇ ಶ್ರಮ ಮಹಿಸಿದರೂ ಪದಕ ಗೆಲ್ಲಲಾಗುತ್ತಿಲ್ಲವಲ್ಲ ಅನ್ನುವ ನೋವು. ಆಗ ಜತೆಯಾಗಿಯೇ ಇತ್ತು. ಆದರೆ ಆ ನೋವಿಗೆ 2016ರಲ್ಲಿ ತೆರೆಬಿತ್ತು. 

ಮೊದಲ ಪದಕಕ್ಕೆ ವಿಶೇಷ ಸ್ಥಾನ
ಈವರೆಗೆ ರಾಷ್ಟ್ರೀಯ, ರಾಜ್ಯ ಸೇರಿದಂತೆ 37ಕ್ಕೂ ಅಧಿಕ ಪದಕ್ಕ ಗೆದ್ದರೂ ವಿಶ್ವಂಭರನಿಗೆ ಖುಷಿ ನೀಡುತ್ತಿರುವುದು ಮೊದಲು ಗೆದ್ದ ಪದಕ. 14 ವರ್ಷದೊಳಗಿನ ರಾಜ್ಯ ಮಟ್ಟದ 4 ಕಿ.ಮೀ ಓಟದಲ್ಲಿ ತೀವ್ರ ಸ್ಪರ್ಧೆ ಇತ್ತು. ವಿಶ್ವಂಬರ ಫೈನಲ್‌ ಸುತ್ತಿಗೇರಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ಇದು ವಿಶ್ವಂಭರನಿಗೆ ಸಿಕ್ಕ ಮೊದಲ ರಾಜ್ಯ ಪದಕ. ಇವತ್ತಿಗೂ ಖುಷಿ ನೀಡುತ್ತಿರುವುದು, ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿರುವುದು ಇದೇ ಪದಕ ಎಂದು ವಿಶ್ವಂಭರ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗುರಿ ದೊಡ್ಡದಿದೆ
ಈಗಾಗಲೇ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಪದಕ ಗೆದ್ದಿರುವ ವಿಶ್ವಂಭರನಿಗೆ ಇರುವ ಗುರಿ ಅಂತಾರಾಷ್ಟ್ರೀಯ ಪದಕ ಗೆಲ್ಲುವುದು. ಹೀಗಾಗಿ ಕೋಚ್‌ ಕ್ಯಾಪ್ಟನ್‌ ಮುರುಳೀದರ್‌ ಅವರಿಂದ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ಕೂರ್ಗ್‌ ನಲ್ಲಿರುವ ಅಶ್ವಿ‌ನಿ ನ್ಪೋರ್ಟ್ಸ್ ಫೌಂಡೇಷನ್‌ನಲ್ಲಿ ತರಬೇತಿ ನಡೆಸುತ್ತಿದ್ದಾರೆ. ಈ ವರ್ಷ ನಡೆದ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 800 ಮೀ. ಓಟದಲ್ಲಿ ಪಾಲ್ಗೊಂಡು 6ನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.  ಮುಂದಿನ ವರ್ಷದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯುವುದು. 2020 ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಸಾಧನೆ ಮಾಡಬೇಕೆಂಬ ಗುರಿ ಈ ಕನ್ನಡಿಗನದು.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next