Advertisement

ವಿಶ್ವಕರ್ಮ ಸಮಾಜ ಸೌಲಭ್ಯಗಳಿಂದ ವಂಚಿತ

06:42 AM Jan 02, 2019 | |

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜ ಸೌಲಭ್ಯಗಳಿಂದ ವಂಚಿತವಾಗಿದ್ದು, ಸೌಲಭ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿಯವರ 6ನೇ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಕಣಾಚಾರಿಯವರ ಜನ್ಮಸ್ಥಳವಾದ ಕೈದಾಳ ಅಭಿವೃದ್ಧಿ ಹಾಗೂ ವಿಶ್ವಕರ್ಮ ಅಭಿವೃದ್ಧಿ ಟ್ರಸ್ಟ್‌ಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಿದ್ದೆವು. ಈಗ ಮಹಾಸಭಾದಿಂದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸರ್ಕಾರದ ಮೇಲೆ ಸೂಕ್ತ ಸಮಯದಲ್ಲಿ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

ವಿಶ್ವಕರ್ಮ ಸಮಾಜ ಜಗತ್ತಿಗೆ ಅದ್ಭುತ ಕಲೆಯ ಕೊಡುಗೆ ನೀಡಿದೆ. ಕುಶಲಕರ್ಮಿಗಳಾಗಿರುವ ವಿಶ್ವಕರ್ಮರು ಸ್ವಾವಲಂಬಿಗಳಾಗಿದ್ದಾರೆ. ಪಾರಂಪರಿಕ ಶಿಲ್ಪಕಲೆ, ಐತಿಹಾಸಿಕ ದೇವಸ್ಥಾನ, ವೈಭವದ ಮಹಲ್‌ಗ‌ಳು ವಿಶ್ವಕರ್ಮ ಸಮಾಜದ ಕೊಡುಗೆಗಳಾಗಿವೆ. ಬೇಲೂರಿನ ಚನ್ನಕೇಶವ ದೇವಸ್ಥಾನ ನಾಡಿನ ಅದ್ಭುತಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಪಿ.ನಂಜುಂಡಿ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ನಮಗೆ ರಾಜಕೀಯ ಶಕ್ತಿಯೂ ಇಲ್ಲ. 16 ವರ್ಷದ ಹೋರಾಟದ ಫ‌ಲವಾಗಿ ಸರ್ಕಾರವೇ ವಿಶ್ವಕರ್ಮ ಜಯಂತಿ ಮಾಡುವಂತಾಗಿದೆ. ಜಕಣಾಚಾರಿಯವರನ್ನು ಕಾಲ್ಪನಿಕ ವ್ಯಕ್ತಿ ಎಂದು ಬಿಂಬಿಸುವ ಹುನ್ನಾರ ನಡೆದಿದೆ. ನಾವು ಜಕಣಾಚಾರಿಯವರ ಕುರಿತು ಸಂಶೋಧನೆ ಮಾಡಿದ್ದೇವೆ. ಬೇಲೂರಿನ ಚೆನ್ನಕೇಶವ ದೇವಸ್ಥಾನ ಸಹಿತವಾಗಿ 660 ದೇವಾಲಯಗಳನ್ನು ಅಮರಶಿಲ್ಪಿ ಜಕಣಾಚಾರಿ ಕೆತ್ತಿದ್ದಾರೆ. ಆದರೆ, ಎಲ್ಲಿಯೂ ಅವರು ಹೆಸರನ್ನು ಹಾಕಿಕೊಂಡಿಲ್ಲ ಎಂದರು.

Advertisement

ಶಿಲ್ಪಿಯು ಪ್ರತಿಮೆ ಕೆತ್ತನೆ ಮಾಡುವಾಗ ಎಲ್ಲಿಯೂ ತನ್ನ ಹೆಸರು ಬರಬೇಕು ಎಂದು ಬಯಸುವುದಿಲ್ಲ. ಸ್ವಾರ್ಥರಹಿತವಾಗಿ ಕೆಲಸ ಮಾಡುತ್ತಾನೆ. ನಿಸ್ವಾರ್ಥ ಸೇವೆಗೆ ಹೆಸರಾಗಿರುವ ವಿಶ್ವಕರ್ಮ ಸಮಾಜಕ್ಕೆ ನ್ಯಾಯ ಸಿಗಬೇಕಾದರೆ, ಬೇಲೂರಿನ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿಯವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ರಾಜ್ಯದ ಯಾವುದಾದರೂ ಒಂದು ವಿವಿಗೆ ಜಕಣಾಚಾರಿಯವರ ಹೆಸರಿಡಬೇಕು.

ಪ್ರತಿ ವರ್ಷ ಜ.1ರಂದು ಸರ್ಕಾರವೇ ಜಕಣಾಚಾರಿಯವ ಸಂಸ್ಮರಣೆ ದಿನಾಚರಣೆ ನಡೆಸಬೇಕು ಹಾಗೂ ಪ್ರತಿ ಜಿಲ್ಲೆಯಲ್ಲೂ ಪ್ರತಿಷ್ಠಿತ ಸ್ಥಳಗಳಿಗೆ ಜಕಣಾಚಾರಿ ಹೆಸರು ಇಡಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತನ್ನದೇ ಆದ ಇತಿಹಾಸ ಹಾಗೂ ಗಾಧ ಕೌಶಲ್ಯ ಹೊಂದಿರುವ ವಿಶ್ವಕರ್ಮ ಸಮಾಜ ಇಂದು ಸಂಕಷ್ಟದಲ್ಲಿದ್ದು, ಸಮಾಜವನ್ನು ಸಂಘಟಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುಜರಾತಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಪ್ರತಿಮೆಯ ಶಿಲ್ಪಕಾರರಾದ ರಾಮ್‌ ವಿ. ಸುತಾರ್‌ ಮತ್ತು ಅವರ ಪುತ್ರನನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಎನ್‌.ರವಿಕುಮಾರ್‌, ವೇಣುಗೋಪಾಲ್‌ ಹಾಗೂ ವಿಶ್ವಕರ್ಮ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next