ಕಾಪು : ತಮ್ಮ ಚತುರ್ಥ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯವೆಂದು ಘೋಷಿಸಿದ್ದೇವೆ. ವಿಶ್ವ ಎಂದರೆ ಜಗತ್ತು, ಎಲ್ಲೂರಿನ ವಿಶ್ವನಾಥ ದೇವರು ಎಂಬ ಅರ್ಥವಿದೆ. ಎಲ್ಲೂರು ಎಂದರೆ ಎಲ್ಲರ ಊರು. ಹಾಗಾಗಿ ಇದು ಎಲ್ಲೂರು ವಿಶ್ವೇಶ್ವರ ದೇವರ ಪರ್ಯಾಯವಾಗಲಿದೆ. ತಮ್ಮ ಹಿಂದಿನ ಪರ್ಯಾಯಗಳನ್ನು ವಿಶ್ವನಾಥ ದೇವರು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟಿದ್ದು ಚತುರ್ಥ ಪರ್ಯಾಯವನ್ನೂ ಅತ್ಯುತ್ತಮ ರೀತಿಯಲ್ಲಿ ನಡೆಸಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಭಾವೀ ಪರ್ಯಾಯ ಪೀಠಾಧಿಪತಿ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಪೂರ್ವಭಾವಿಯಾಗಿ ಗುರುವಾರ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವತಾ ಪ್ರಾರ್ಥನೆ ಸಲ್ಲಿಸಿ, 108 ಸೀಯಾಳವನ್ನು ಸಮರ್ಪಿಸಿ ಕ್ಷೇತ್ರದ ಆಡಳಿತ ಮಂಡಳಿ, ಗ್ರಾಮ ಸೀಮೆ ಮತ್ತು ಭಕ್ತರ ಗೌರವವನ್ನು ಸ್ವೀಕರಿಸಿ ಬಳಿಕ ಆಶೀರ್ವಚನ ನೀಡಿದರು.
ಶ್ರೀ ವಾದಿರಾಜರಿಗೆ ಬಾಗಿಲನ್ನು ತೆರೆದು ದರ್ಶನವನ್ನು ನೀಡಿದ ವಿಶ್ವನಾಥ ದೇವರು ಶ್ರೀ ಕೃಷ್ಣ ಮಠ ಪರಂಪರೆಯ ಪರ್ಯಾಯದ ವ್ಯವಸ್ಥೆಗೂ ಆಶೀರ್ವಚನ ನೀಡುತ್ತಿದ್ದಾರೆ. ಆಶ್ರಮ ಸ್ವೀಕಾರ ಸಂದರ್ಭ ವಿಶ್ವನಾಥ ದೇವರ ಅನುಗ್ರ ಪಡೆದೇ ಮುನ್ನಡೆದಿದ್ದು ಈಗ ನಮ್ಮ ಸನ್ಯಾಸ ಸ್ವೀಕಾರದ ಸುವರ್ಣ ವರ್ಷ ಸಂಭ್ರಮದಲ್ಲಿದ್ದೇವೆ. ಎಲ್ಲೂರಿನ ವಿಶ್ವನಾಥ ದೇವರು ಸ್ವರ್ಣಪ್ರಿಯನಾಗಿದ್ದು ಅವರ ಸನ್ನಿಧಾನದಲ್ಲಿ ತಮ್ಮ ಸನ್ಯಾಸ ಸ್ವೀಕಾರದ ಸುವರ್ಣ ವರ್ಷಾಚರಣೆಯ ನೆನಪಿಗಾಗಿ ಪಾರ್ಥಸಾರಥಿ ಕೃಷ್ಣನಿಗೆ ಸುವರ್ಣ ರಥ ಸಮರ್ಪಣೆಗೆ ಪೂರಕ ಪ್ರಾರ್ಥನೆ ಸಲ್ಲಿಸಲಾಗಿದೆ. ವಿಶ್ವಗೀತಾ ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣನಿಗೆ ಕೋಟಿ ಗೀತಾ ಯಜ್ನ ಸಮರ್ಪಣೆಯ ಸಂಕಲ್ಪವಿದೆ. ಅದರ ಜತೆಗೆ ಎಲ್ಲ ಯೋಜನೆಗಳಿಗೂ ದೇವರ ಆಶೀರ್ವಾದ ಮತ್ತು ಮಠದ ಭಕ್ತರ ಸಹಕಾರದೊಂದಿಗೆ ಎಲ್ಲ ಯೋಜನೆಗಳನ್ನೂ ಸಮರ್ಪಿಸಿ ಮತ್ತೆ ಸನ್ನಿಧಾನಕ್ಕೆ ಬರುತ್ತೇವೆ ಎಂದರು.
ದೇಗುಲದ ತಂತ್ರಿ ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿ ಮತ್ತು ಅರ್ಚಕ ವೇ| ಮೂ| ವೆಂಕಟೇಶ ಭಟ್ ನೇತೃತ್ವದಲ್ಲಿ ಸ್ವಾಮೀಜಿಯವರನ್ನು ಸ್ವಾಗತಿಸಿ, ಪಾದಪೂಜೆ ನೆರವೇರಿಸಲಾಯಿತು.
ಪವಿತ್ರಪಾಣಿ ಕೆ. ಎಲ್. ಕುಂಡಂತಾಯ, ದೇಗುಲದ ಕಾರ್ಯ ನಿರ್ವಹಣಾಽಕಾರಿ ರಾಜಗೋಪಾಲ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣಾಕರ ಶೆಟ್ಟಿ ಕಳತ್ತೂರು, ಮಾಜಿ ಆಡಳಿತ ಮೊಕ್ತೇಸರ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಸದಸ್ಯರಾದ ಜೆನ್ನಿ ನರಸಿಂಹ ಭಟ್, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವರಾಜ ರಾವ್ ನಡಿಮನೆ, ಎಲ್ಲೂರು ಗ್ರಾ.ಪಂ. ಅಧ್ಯಕ್ಷ ರವಿರಾಜ ರಾವ್, ಪ್ರಮುಖರಾದ ಕೇಂಜ ಭಾರ್ಗವ ತಂತ್ರಿ, ಜೆನ್ನಿ ಅನಂತಪದ್ಮನಾಭ ಭಟ್, ಸದಾಶಿವ ಶೆಟ್ಟಿ ಎಲ್ಲೂರುಗುತ್ತು, ನಿರಂಜನ್ ಶೆಟ್ಟಿ, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ನಯೇಶ್ ಪಿ. ಶೆಟ್ಟಿ, ಸದಾಶಿವ ಶೆಟ್ಟಿ ಎಲ್ಲೂರು, ಎಲ್ಲೂರು ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಸುವರ್ಣ, ಶ್ರೀ ಪುತ್ತಿಗೆ ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.