ಚಿಕ್ಕೋಡಿ: ಶ್ರಮವಿಲ್ಲದೇ ಯಾವುದೇ ಕೆಲಸ ಆಗುವುದಿಲ್ಲ, ಇಂದಿನ ಯುವಕರು ಮೊಬೈಲ್ ವ್ಯಸನದಿಂದಾಗಿ ಆಟ ಆಡುವುದನ್ನೇ ಬಿಟ್ಟಿರುವುದು ವಿಷಾದನೀಯ. ಗಟ್ಟಿ ನಿರ್ಧಾರದಿಂದ ಮುನ್ನುಗಿದರೆ ಎಲ್ಲ ಕೆಲಸದಲ್ಲೂ ಯಶಸ್ಸು ಸಿಗುತ್ತದೆಂದು ಖ್ಯಾತ ಕ್ರಿಕೆಟ್ಪಟು ಅನಿಲ ಕುಂಬ್ಳೆ ಹೇಳಿದರು.
ಗಡಿಭಾಗದ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ವಿಶ್ವವಿಖ್ಯಾತ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವಚೇತನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳು ಆಟ ಆಡುವುದು ತೀರ ವಿರಳವಾಗುತ್ತಿರುವುದರಿಂದ ನಾವು ಕ್ರೀಡೆಗಳಿಗೆ ಉತ್ತೇಜನ ನೀಡಬೇಕಾಗಿದೆ. ಕೆಎಲ್‌ಇ ಸಂಸ್ಥೆಯಂತೆ ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿದ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಾನು ಟೆನ್ ವೀಕ್ಸ್ ಎಂಬ ಕ್ರೀಡಾ ಸಂಸ್ಥೆಯನ್ನು ಹುಟ್ಟುಹಾಕಿ ನಾಡಿಗೆ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಇತಿಹಾಸ ಪ್ರಸಿದ್ಧ ಪರಮ ಪವಿತ್ರ ತಾಣದಲ್ಲಿ ವಿಶ್ವಚೇತನ ಪ್ರಶಸ್ತಿ ನನಗೆ ಸಂದಿದ್ದು ಸಂತೋಷ ತಂದಿದೆ. ನಾನು ಸಹ ಮಧ್ಯಮ ವರ್ಗದಲ್ಲಿ ಆಡಿ ಬೆಳೆದಿದ್ದು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ. ನಾನು ಜಯನಗರದ ಯಡೂರಿನಲ್ಲಿ ಆಡಿ ಬೆಳೆದಿದ್ದು, ನನ್ನ ಪತ್ನಿಯ ಹೆಸರು ಚೇತನ ಎಂದಿದ್ದು, ಇಂದು ಯಡೂರಿನಲ್ಲಿ ವಿಶ್ವಚೇತನ ಪ್ರಶಸ್ತಿ ದೊರಕಿದ್ದು ನನ್ನ ಸೌಭಾಗ್ಯವೆಂದರು. ಇಂದು ಕರ್ನಾಟಕ ರಣಜಿ ಕ್ರಿಕೆಟ್ ತಂಡದಲ್ಲಿ ಗ್ರಾಮೀಣ ಪ್ರತಿಭೆಗಳು ಹೆಚ್ಚಿನ ಅವಕಾಶ ಪಡೆಯುತ್ತಿದ್ದು, ಹುಮ್ಮಸ್ಸು ನಿಷ್ಠೆ ಗ್ರಾಮೀಣ ಪ್ರದೇಶದ ಯುವಕರಲ್ಲಿ ಹೆಚ್ಚಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಕರ್ನಾಟಕ ರಾಜ್ಯಕ್ಕೆ ವೀರಶೈವ ಲಿಂಗಾಯತ ಮಠಗಳು ಕಾಯಕ ದಾಸೋಹದ ದೊಡ್ಡ ಕೊಡುಗೆ ನೀಡಿವೆ. ಕನ್ನಡಿಗ ಕ್ರಿಕೆಟ್ ಆಟಗಾರ ಅನಿಲ ಕುಂಬ್ಳೆಯಂತಹ ಆಟಗಾರರು ಇಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದು, ಅವರಿಗೆ ಗಡಿಭಾಗದಲ್ಲಿ ಯಡೂರ ಶ್ರೀಮಠದಿಂದ ಗೌರವಿಸುತ್ತಿರುವುದು ಇತಿಹಾಸ ಸೃಷ್ಟಿಸಿದೆ. ಸಮಾಜದ ಉನ್ನತಿಗಾಗಿ ರಾಜಕಾರಣಿಗಳು ನುಡಿದಂತೆ ನಡೆಯಬೇಕಾಗಿದ್ದು ಶ್ರೀಮಠದ ಅಭ್ಯುದಯಕ್ಕೆ ಪಕ್ಷಾತೀತ ಕಾರ್ಯ ಮಾಡಬೇಕಾಗಿದೆ ಎಂದರು.
ಶ್ರೀಶೈಲ ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿಪೀಠದ ಜಗದ್ಗುರು ಶ್ರೀ ಡಾ| ಚಂದ್ರಶೇಖರ ಶಿವಚಾರ್ಯ ಮಹಾಸ್ವಾಮೀಜಿ ಹಾಗೂ ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪಡಸಾವಳಗಿಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ, ಬೆಂಗಳೂರಿನ ವಿಭೂತಿಮಠದ ಡಾ| ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಡಾ| ಪ್ರೀತಿ ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ಬಸವ ಜ್ಯೋತಿಯುಥ್ ಫೌಂಡೇಶನ್‌ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಶಿರಸಿಯ ಡಾ| ವೆಂಕಟರಮಣ ಹೆಗಡೆ, ಧಾರವಾಡದ ಭೀಮಾಂಬಿಕಾ ನಶಿಬಿ, ಡಿಕೆಎಸ್.ಎಸ್.ಕೆ. ಸಂಚಾಲಕ ಅಜೀತದೇಸಾಯಿ, ಯಡೂರ ಪಿ.ಕೆ.ಪಿ.ಎಸ್. ಅಧ್ಯಕ್ಷ ರಣಜೀತ ದೇಸಾಯಿ, ಗ್ರಾ.ಪಂ. ಅಧ್ಯಕ್ಷ ಭೀಮಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.