Advertisement
ಸಹಸ್ರಮಾನ ಅಥವಾ ಶತಮಾನದಲ್ಲೊಮ್ಮೆ ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಮಹಾ ಪುರುಷರು ಜನ್ಮವೆತ್ತಿ ಬರುತ್ತಾರೆ, ತಮ್ಮ ಕಾರ್ಯ ಮುಗಿದೊಡನೆ ಸದ್ದಿಲ್ಲದೇ ನಿರ್ಗಮಿಸುತ್ತಾರೆ ಎಂಬ ಮಾತು, ವಯೋಸಹಜ ಅಸೌಖ್ಯದಿಂದ ಜ. 2ರಂದು ನಮ್ಮನ್ನಗಲಿದ ಬಸ್ತಿ ವಾಮನ ಶೆಣೈ ಅವರ ಜೀವನಕ್ಕೆ ನೂರಕ್ಕೆ ನೂರರಷ್ಟು ಅನ್ವಯಿಸುತ್ತದೆ.
Related Articles
ಸಾಮಾನ್ಯವಾಗಿ ಸಾಹಿತಿಗಳು ಮಾತ್ರ ಓದುಗಶೀಲರಾಗಿರುತ್ತಾರೆ, ಚಳವಳಿ ಸಂಘಟನೆ ಯಲ್ಲಿರುವವರಿಗೆ ಓದಿನಲ್ಲಿ ಕಡಿಮೆ ಆಸಕ್ತಿ, ಅಥವಾ ಬಿಡುವು ಇರುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತೆ ದಿನಪತ್ರಿಕೆಯಿಂದ ಹಿಡಿದು, ನಿಯತಕಾಲಿಕ, ಕೊಂಕಣಿಯಲ್ಲಿ ಪ್ರಕಟವಾಗುವ ಪ್ರತೀ ಪುಸ್ತಕವನ್ನು ಅವರು ಓದುತ್ತಿದ್ದರು.
Advertisement
ತಾನು ಏನು ಕೆಲಸ ಮಾಡಬೇಕು, ಏನು ಮಾತನಾಡಬೇಕು, ಹೇಗೆ ಬದುಕಬೇಕು – ಎಂಬ ಬಗ್ಗೆ ಅವರಲ್ಲಿ ಎಳ್ಳಷ್ಟೂ ಗೊಂದಲಗಳಿರಲಿಲ್ಲ. ಇಂದು ಹಿಂದಿರುಗಿ ನೋಡಿದಾಗ, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪನೆ ಮಾಡುವಾಗಲೂ ಈ ಸಂತ ಮನುಷ್ಯರಲ್ಲಿ ಯಾವುದೇ ಗೊಂದಲಗಳಿದ್ದಂತೆ ನನಗಂತೂ ಕಾಣುವುದಿಲ್ಲ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ತಳಪಾಯದ ಮೇಲೆ ಸ್ಥಾಪಿ ಸುವ ಕೇಂದ್ರಕ್ಕೆ ವಿಶ್ವ ಕೊಂಕಣಿ ಕೇಂದ್ರ ಎಂದು ಹೆಸರಿಡಬೇಕಾದರೆ, ಭವಿಷ್ಯದಲ್ಲಿ ಈ ಕೇಂದ್ರ ಕೇವಲ ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಮಾತ್ರ ಸೀಮಿತವಾಗಿ ಉಳಿಯಬಾರದು, ಸಮಸ್ತ ಕೊಂಕಣಿ ಸಮಾಜ ವನ್ನು ಮೇಲೆತ್ತುವ ಕೆಲಸದಲ್ಲಿ ತೊಡಗಿ, ಕೊಂಕಣಿ ಸಮಾಜ ಸಶಕ್ತ ಸಮಾಜವಾಗಿ ರೂಪು ಗೊಳಿಸಬೇಕು ಮಾತ್ರ ವಲ್ಲ ವಿಶ್ವವ್ಯಾಪಿಯಾಗಬೇಕು ಎಂಬ ಸ್ಪಷ್ಟ ದೂರದೃಷ್ಟಿಯನ್ನು ಹೊಂದಿದ ಮಹಾಪುರುಷ ಅವರಾಗಿದ್ದರು. ಕಾಲಾನುಕ್ರಮದಲ್ಲಿ ಅವರ ಯೋಚನೆಯನ್ನು ಯೋಜನೆಯಾಗಿ ಸಾಕಾರ ಗೊಳಿಸಲು ಟಿ. ವಿ. ಮೋಹನದಾಸ ಪೈ, ಯು. ರಾಮದಾಸ ಕಾಮತ್, ಪ್ರದೀಪ್ ಪೈ ಅವರಂತಹ ಮಹಾನುಭಾವರು ಸಾಥ್ ನೀಡಿದರು.
ಇಂದು ವಿಶ್ವ ಕೊಂಕಣಿ ಕೇಂದ್ರ ಕೇವಲ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಕೊಂಕಣಿ ಮಾತೃಭಾಷೆಯಾಗಿರಬೇಕು ಎಂಬುದು ಒಂದು ಕೊಂಡಿಯಷ್ಟೇ, ಸಾವಿ ರಾರು ವಿದ್ಯಾರ್ಥಿಗಳು ಕೋಟ್ಯಂತರ ರೂ. ವಿದ್ಯಾರ್ಥಿವೇತನ ಪಡೆದು ಇಂದು ವೈದ್ಯರಾಗಿ, ಎಂಜಿನಿಯರ್‌ಗಳಾಗಿ ಕೊಂಕಣಿ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಸುಸಜ್ಜಿತ ಹಾಸ್ಟೆಲ್ ಇದ್ದು ಕ್ಷಮತಾ ಶಿಬಿರಗಳು ನಡೆಯು ತ್ತಿವೆ. ಕೊಂಕಣಿಯ ಮುಂದಿನ ಪೀಳಿಗೆ ಗಾಗಿ ವಿದ್ಯಾರ್ಥಿ ವೇತನ, ವೃತ್ತಿ ಮಾರ್ಗದರ್ಶನದ ರೂಪದಲ್ಲಿ ನೆರವಾಗುತ್ತಿದ್ದರೆ, ದುರ್ಬಲ ವರ್ಗದ ಮಹಿಳೆಯರಿಗೆ ಹೊಲಿಗೆ ತರಬೇತಿ, ಕರಕುಶಲ ವಸ್ತುಗಳ ತರಬೇತಿ, ಅವರು ತಯಾ ರಿಸಿದ ಉತ್ಪನ್ನಗಳ ಮಾರುಕಟ್ಟೆಗೂ ವ್ಯವಸ್ಥೆ ಮಾಡಲಾಗಿದೆ. ಅದೆಷ್ಟೋ ಹೊಲಿಗೆ ಯಂತ್ರ ಗಳನ್ನು ವಿತರಿಸಲಾಗಿದೆ.
ಮಂಗಳೂರಿನಲ್ಲಿ ಈ ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ಚಂದ್ರಶೇಖರ್ ಅವರು ಕಾರ್ಯಕ್ರಮದ ವೇದಿಕೆಯಿಂದ ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. “ಬಸ್ತಿ ವಾಮನ ಶೆಣೈ ನನ್ನ ಕ್ಯಾಬಿನ್ ಒಳಗೆ ಪ್ರಥಮ ಬಾರಿ ಬಂದಾಗ ಯಾವುದೋ ಒಂದು ವಿಶೇಷ ತೇಜಸ್ಸು ಒಳಗೆ ಪ್ರವೇಶಿಸಿದ ಅನುಭವವಾಯಿತು. ಅವರು ಬಾಗಿಲಿನಿಂದ ನನ್ನ ಎದುರಿನ ಆಸನದ ಬಳಿ ಬರುವಷ್ಟರಲ್ಲಿ ನನಗರಿವಿಲ್ಲದೇ ನಾನು ಎದ್ದು ನಿಂತಿದ್ದೆ’.ಭಾಷೆ, ಸಾಹಿತ್ಯದ ವಲಯದ ಆಚೆಗಿರುವ ಒಬ್ಬ ಅಧಿಕಾರಿ ತಮಗಾದ ದಿವ್ಯ ಅನುಭವವನ್ನು ಕಾರ್ಯಕ್ರಮ ವೊಂದರ ತುಂಬಿದ ವೇದಿಕೆಯಿಂದ ಮುಲಾಜಿಲ್ಲದೇ ಹಂಚಿಕೊಳ್ಳುತ್ತಾರೆ ಅಂದರೆ – ಬಸ್ತಿ ವಾಮನ ಶೆಣೈ ಅವರಲ್ಲಿ ಯಾವ ಮಟ್ಟದ ತೇಜಸ್ಸು ತುಂಬಿದ್ದಿರಬಹುದು ಎಂಬುದನ್ನು ಅರಿಯಲು ವಿಶೇಷ ಅಧ್ಯಯನದ ಅಗತ್ಯವಿಲ್ಲ. ನಮ್ಮ ನಿಲುಕಿಗೆ ಸಿಗದ ಅಗಾಧ ಮನುಷ್ಯ ಪ್ರೇಮ, ಮಮತೆ ಮತ್ತು ಮುತ್ಸದ್ದಿತನದ ಮೂರ್ತ ರೂಪದಂತೆ ಬದುಕಿ, ನಿಜವಾದ ಅರ್ಥದಲ್ಲಿ ವಿಶ್ವಮಾನವರಾಗಬೇಕಾದರೆ ನಾವೆಲ್ಲ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟು, ತನಗೆ ವಹಿಸಿಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಅಲ್ಲಲ್ಲಿ ಸಸಿಗಳಂತೆ ನಮ್ಮನ್ನು ನೆಟ್ಟು, ಸದ್ದಿಲ್ಲದೆ ಎದ್ದು ಹೋದ ತಂದೆಯಂತಹ ಧೀಮಂತ ವ್ಯಕ್ತಿ – ಬಸ್ತಿ ವಾಮನ ಶೆಣೆ„ ಅವರು. ಈಗ ಅವರ ಕೈಯಾರೆ ಸಸಿಗಳಾಗಿ ನೆಡಲ್ಪಟ್ಟ ನಾವು ಬೆಳೆದು, ನೆರಳಾಗುವ, ಹಸುರಾಗುವ, ಉಸಿರಾಗುವ. ಅವರಂತೆ ವಿಶ್ವಮಾನವರಾಗಲು ಸಾಧ್ಯವಿಲ್ಲದಿದ್ದರೂ ಅವರನ್ನು ಅನುಕರಿಸುವುದೇ ನಾವು ಬಸ್ತಿ ವಾಮನ ಶೆಣೈ ಅವರಿಗೆ ಅರ್ಪಿಸ ಬಹುದಾದ ನಿಜವಾದ ನುಡಿನಮನ. -ಎಚ್ಚೆಮ್, ಪೆರ್ನಾಲ್ ಕೊಂಕಣಿ ಲೇಖಕರು