Advertisement

ಭಾರತ ಬೌದ್ಧಿಕ ಸಂಪತ್ತಿನಲ್ಲಿ ವಿಶ್ವಗುರು: ಓಂ ಬಿರ್ಲಾ

06:35 PM Mar 11, 2022 | Team Udayavani |

ಬೆಳಗಾವಿ: ಜಗತ್ತಿನ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಹೆಸರುವಾಸಿಯಾಗಿದೆ. ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ವಿಜ್ಞಾನಿಗಳಾಗಿ, ತಂತ್ರಜ್ಞರಾಗಿ ಮುನ್ನಡೆಯುತ್ತಿದ್ದಾರೆ. ಅಪಾರ ಬೌದ್ಧಿಕ ಸಂಪತ್ತು ಹೊಂದಿರುವ ಭಾರತ ವಿಶ್ವಗುರು ಆಗಿ ಹೊರಹೊಮ್ಮುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದರು.

Advertisement

ನಗರದಲ್ಲಿ ಗುರುವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಬೌದ್ಧಿಕ ಸಂಪತ್ತಿನಿಂದ ಭಾರತ ಶ್ರೀಮಂತ ರಾಷ್ಟ್ರವಾಗಿದೆ. ಇದನ್ನು ಅರಿತುಕೊಂಡು ಕೃಷಿ, ವೈದ್ಯಕೀಯ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತ ಉನ್ನತ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಯುವಸಮುದಾಯ ಮುಂದಾಗಬೇಕು.ಹೊಸ ಸಂಶೋಧನೆ, ಆವಿಷ್ಕಾರ ಬಗ್ಗೆ  ಚಿಂತಿಸಬೇಕು ಎಂದು ಹೇಳಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಭಾರತದಲ್ಲಿ ಡಿಜಿಟಲ್‌ ಶಿಕ್ಷಣದ ಹೊಸ ಯುಗ ಆರಂಭಗೊಂಡಿದೆ. ಶಾಲೆ- ಕಾಲೇಜುಗಳಲ್ಲಿಯೂ ಡಿಜಿಟಲ್‌ ಆನ್‌ಲೈನ್‌ ಶಿಕ್ಷಣ ಹೆಚ್ಚು ಮಹತ್ವ ಪಡೆದುಕೊಂಡಿತು. ಡಿಜಿಟಲ್‌ ಶಿಕ್ಷಣದಲ್ಲಿ ಅನೇಕ ಸವಾಲುಗಳಿವೆ. ಆದರೂ ಅವೆಲ್ಲವನ್ನೂ ಮೀರಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಬೆಳೆಯುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಡಿಜಿಟಲ್‌, ಮಾಹಿತಿ-ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ ಎಂದರು.

ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳ ಜೀವನದಲ್ಲಿ ಇದು ಅವಿಸ್ಮರಣೀಯ ದಿನವಾಗಿದೆ. ಜೀವನದಲ್ಲಿ ಕಠಿಣ ಪರಿಶ್ರಮ, ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿ ಸಾಧನೆಗೈದು ಸುವರ್ಣ ಪದಕ ಹಾಗೂ ರ್‍ಯಾಂಕ್‌ ಗಳಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದು ಅವರಿಗೆ ಕಲಿಸಿದ ಗುರುಗಳಿಗೂ ಅವಿಸ್ಮರಣೀಯ ದಿನ. ಶಿಕ್ಷಣ, ಜ್ಞಾನದ ಅನುಭವದ ಆಧಾರದ ಮೇಲೆ ಹೊಸ ಹೆಜ್ಜೆ ಇಟ್ಟು ಇದನ್ನು ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು ಎಂದರು.

ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವ ಡಾ| ಅಶ್ವತ್ಥನಾರಾಯಣ ಮಾತನಾಡಿ, ನಿಮ್ಮ ಜ್ಞಾನ ಕೇವಲ ಉದ್ಯೋಗ ಪಡೆಯಲು ಸೀಮಿತಗೊಳಿಸದೇ ಉದ್ಯೋಗ ಸೃಷ್ಟಿಸಲು ಬಳಸಿಕೊಳ್ಳಬೇಕು. ಸರ್ಕಾರ ನೀಡಿರುವ ಅವಕಾಶಗಳನ್ನು ಬಳಸಿಕೊಂಡು ನವೋದ್ಯಮಿಗಳಾಗಿ ಹೊರಹೊಮ್ಮಬೇಕು. ಅನೇಕ ಸವಾಲುಗಳ ಮಧ್ಯೆ ಬದುಕಬೇಕಿದೆ ಎಂದರು. ಎಸ್‌.ಜಿ. ಬಾ ಳೇಕುಂದ್ರಿ ಅವರ ಹೆಸರಿನಲ್ಲಿ ವಿಟಿಯುನಲ್ಲಿ ಅಧ್ಯಯನ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.

Advertisement

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ನವ ಪದವೀಧರರು ದೇಶದ ಪ್ರಗತಿಯ ಭಾಗವಾಗಬೇಕು. ಉದ್ಯೋಗ ಹುಡುಕುವವರಾಗದೇ ಉದ್ಯೋಗ ಸೃಷ್ಟಿಸುವವರಾಗಬೇಕು. ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು. ವಿಜ್ಞಾನ-ತಂತ್ರಜ್ಞಾನ, ತಾಂತ್ರಿಕ ಕ್ಷೇತ್ರದ ಸಾಧನೆಯಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೆ.

ಯುವ ಸಮುದಾಯವನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವ ನಮ್ಮ ದೇಶದ ಕಡೆ ಇಡೀ ವಿಶ್ವ ಗಮನಿಸುತ್ತಿದೆ. 21ನೇ ಶತಮಾನವು ಭಾರತದ ಸಾಧನೆಗೆ ಸಾಕ್ಷಿಯಾಗಲಿದೆ ಎಂದರು. ದೇಶದ ಸರ್ವಾಂಗೀಣ ಅಭಿವೃದ್ಧಿ ಸರಕಾರದ ಆಶಯವಾಗಿದೆ. ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು. ಸಂಸದೆ ಮಂಗಲಾ ಅಂಗಡಿ, ವಿಟಿಯು ಕುಲಸಚಿವ ಪ್ರೊ|ಆನಂದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ|ರಂಗಸ್ವಾಮಿ ಬಿ.ಇ., ಸಿಂಡಿಕೇಟ್‌ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಗೋಪಾಲಕೃಷ್ಣನ್‌ಗೆ ಗೌರವ ಡಾಕ್ಟರೇಟ್‌
ಪದ್ಮಭೂಷಣ ಪುರಸ್ಕೃತ ಬೆಂಗಳೂರಿನ ಅಕ್ಸಿಲೊರ್‌ ವೆಂಚರ್ಸ್‌ ಅಧ್ಯಕ್ಷರು ಹಾಗೂ ಇನ್ಫೋಸಿಸ್‌ ಸಹಸಂಸ್ಥಾಪಕ ಸೇನಾಪತಿ ಕ್ರಿಶ್‌ ಗೋಪಾಲಕೃಷ್ಣನ್‌ ಗೌರವ ಡಾಕ್ಟರೇಟ್‌ ಪದವಿ ಸ್ವೀಕರಿಸಿ, ಸಂತಸ ವ್ಯಕ್ತಪಡಿಸಿದರು. ಇನ್ಫೊಧೀಸಿಸ್‌ ಸಹೋದ್ಯೋಗಿಗಳ ಸಹಕಾರದಿಂದ ಈ ಗೌರವಕ್ಕೆ ಪಾತ್ರನಾಗಿದ್ದೇನೆ. ಸಿಬ್ಬಂದಿ, ಕುಟುಂಬದವರು, ಶಿಕ್ಷಕರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು. ಪದ್ಮಭೂಷಣ, ಹೈದರಾಬಾದ್‌ನ ಭಾರತ ಬಯೋಟೆಕ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ| ಕೃಷ್ಣ ಎಲ್ಲಾ ಹಾಗೂ ಪದ್ಮಶ್ರೀ ಪುರಸ್ಕೃತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪ್ರೊ|ರೋಹಿಣಿ ಗೊಡಬೋಲೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್‌ ಪದವಿ ಘೋಷಿಸಲಾಯಿತು.

ಮಾತೃಭಾಷೆ ಕನ್ನಡದಲ್ಲೂ ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಶಿಸ್ತು, ಉತ್ಸಾಹ ಹಾಗೂ ನೈತಿಕತೆಯ ಮೂಲಕ ಹೊಸತನ ಮತ್ತು ಸಾಧನೆಗೆ ಮುಂದಾಗಬೇಕು.
ಓಂ ಬಿರ್ಲಾ,
ಲೋಕಸಭೆ ಸಭಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next