Advertisement

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

11:06 AM Sep 19, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಬಂಟರು ಹಾಲಿನಲ್ಲಿ ಸಕ್ಕರೆ ಬೆರೆತಂತೆ. ಇಲ್ಲಿಯ ಸಂಸ್ಕೃತಿಯೊಂದಿಗೆ ತಮ್ಮ ಸಂಸ್ಕೃತಿಯನ್ನು ಕೂಡ ಮೈಗೂಡಿಸಿಕೊಂಡಿದ್ದಾರೆ. ಸಣ್ಣದಾಗಿ ಪ್ರಾರಂಭಿಸಿದ ಹೊಟೇಲ್‌ ಉದ್ಯಮವು ಇಂದು ಬೆಳೆದು ಪಂಚತಾರಾ ಹೋಟೆಲ್‌ಗ‌ಳನ್ನು ನಿರ್ಮಿಸುವಂತೆ ಬಂಟರು ಬೆಳೆದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಬಂಟರು ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿಯಾಗಿರುವುದು ಅಭಿನಂದನೀಯ. ನಾನು ಮೂರು ಬಾರಿ ಬಂಟರ ಸಂಘದ ಕಾರ್ಯಕ್ರಮಗಳಿಗೆ ಬಂದಿದ್ದೇನೆ. ಅದರಿಂದ ನಾನು ನನ್ನ ಹೆಸರನ್ನು ದೇವೇಂದ್ರ ಶೆಟ್ಟಿ ಫ‌ಡ್ನವೀಸ್‌ ಎಂದು ಹೇಳಲು ಇಚ್ಚಿಸುತ್ತೇನೆ. ಬಂಟರ ಪ್ರತೀ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ. ಕರ್ನಾಟಕದೊಂದಿಗೆ ಮಹಾರಾಷ್ಟ್ರ ಹಾಗೂ ದೇಶದ ಅಭಿವೃದ್ಧಿಯಲ್ಲಿ ಬಂಟರ ಕೊಡುಗೆ ಅಪಾರವಾಗಿದೆ ಎಂದು ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ ಅವರು ನುಡಿದರು.

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ರವಿವಾರ ದಿನಪೂರ್ತಿ ಕುರ್ಲಾಪೂರ್ವದ ಬಂಟರ ಭವನದಲ್ಲಿ ಜರಗಿದ ವಿಶ್ವ ಬಂಟರ ಸಮ್ಮೇಳನದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬಂಟರ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದೆ. ತಾವು ಮುಂದೆ ಹೋಗುವಾಗ ಹಿಂದೆ ಉಳಿದವರನ್ನು ಒಟ್ಟಿಗೆ ಸೇರಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡುತ್ತಿದ್ದು, ಇದು ಇಡೀ ಸಮಾಜದ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ಬಂಟ ಸಮಾಜವು ಸಮಾಜದ ಅಭಿವೃದ್ಧಿಗಾಗಿ ಮಾಡುತ್ತಿರುವ ಯಾವುದೇ ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಸಮಾರಂಭದಲ್ಲಿ ಡಿಸಿಎಂ ಫಡ್ನವೀಸ್‌ ಅವರನ್ನು ಜಾಗತಿಕ ಬಂಟರ ಸಂಘ ಹಾಗೂ ಬಂಟರ ಸಂಘ ಮುಂಬಯಿ ವತಿಯಿಂದ ಸಮ್ಮಾನಿಸಲಾಯಿತು. ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ ಐಕಳ ಹರೀಶ್‌ ಶೆಟ್ಟಿ ಅವರನ್ನು ಪಟ್ಲ ಫೌಂಡೇಶನ್‌ ವತಿಯಿಂದಡಿಸಿಎಂ ಫಡ್ನವೀಸ್‌ ಅವರು ಸಮ್ಮಾನಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ಹೊರತಂದ ಐಕಳ ಹರೀಶ್‌ ಶೆಟ್ಟಿ ಅವರ ಸಾರ್ವಭೌಮ ಅಭಿನಂದನಾ ಗ್ರಂಥವನ್ನು ಉಪಮುಖ್ಯಮಂತ್ರಿ ಅವರು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ, ಗ್ರಂಥದ ಗೌರವ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಗೌರವ ಗ್ರಂಥದ ಸಂಪಾದಕಿ ಸಹಾಯಕ ಶಿಕ್ಷಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ, ಉಪಸ್ಥಿತರಿದ್ದರು. ಅವರನ್ನು ಡಿಸಿಎಂ ಫಡ್ನವೀಸ್‌ ಗೌರವಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಸದ ಗೋಪಾಲ್‌ ಶೆಟ್ಟಿ ಅವರು ಮಾತನಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವನ್ನು ನೀಡುವುದರೊಂದಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡುವಂತಹ ಕಾರ್ಯವನ್ನು ಮಾಡುತ್ತಿರುವುದು ಅವರಿಗೆ ಸಮಾಜ ಸೇವೆ ಮೇಲಿರುವ ಜವಾಬ್ದಾರಿಯನ್ನು ತೋರಿಸುತ್ತಿದೆ. ಜಾಗತಿಕ ಬಂಟರ ಸಂಘಕ್ಕೆ ಮಹಾರಾಷ್ಟ್ರ ಸರಕಾರದಿಂದ ಯಾವ ರೀತಿಯಲ್ಲಾದರೂ ಸಹಾಯ-ಸಹಕಾರ ಅಗತ್ಯವಿದ್ದರೆ ಅದನ್ನು ಉಪಮುಖ್ಯಮಂತ್ರಿಯ ಗಮನಕ್ಕೆ ತರುತ್ತೇನೆ. ಒಕ್ಕೂಟದ ಎಲ್ಲ ಸಮಾಪರ ಕಾರ್ಯಗಳಿಗೆ ಸಹಾಯ, ಸಹಕಾರ ಸದಾಯಿದೆ ಎಂದರು.

Advertisement

ಸಾರ್ವಭೌಮ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜಯ ಎ. ಶೆಟ್ಟಿ ಅವರು ನಿರ್ವಹಿಸಿದರು.

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next