Advertisement
ಬಳಿಕ ಮಾತನಾಡಿದ ಮುನಿರತ್ನ, “ವಿಷ್ಣುವರ್ಧನ್ ಕುಟುಂಬ ಸ್ಮಾರಕ ನಿರ್ಮಾಣ ಕುರಿತು ಮುಖ್ಯಮಂತ್ರಿಗೆ ಮನವಿ ಪತ್ರ ಬರೆದು, ನನಗೆ ನೀಡಿದ್ದಾರೆ. ಹಾಗಾಗಿ ಅದರಲ್ಲಿ ಏನಿದೆ ಎಂದು ನಾನು ಓದಲು ಹೋಗುವುದಿಲ್ಲ. ಈ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ, ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸುತ್ತೇನೆ. ಸ್ಮಾರಕ ನಿರ್ಮಾಣ ವಿಚಾರವಾಗಿ ಚಿತ್ರರಂಗ ಹಾಗೂ ಅಭಿಮಾನಿಗಳ ಸಲಹೆ ಪಡೆದುಕೊಳ್ಳುತ್ತೇವೆ. ಆದರೆ, ಕುಟುಂಬದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಅದೇ ಅಂತಿಮ. ಈಗಾಗಲೇ ನಿರ್ಮಾಣವಾಗಿರುವ ಡಾ. ರಾಜ್ ಹಾಗೂ ಅಂಬರೀಶ್ ಸ್ಮಾರಕದಂತೆಯೇ, ವಿಷ್ಣುವರ್ಧನ್ ಸ್ಮಾರಕವೂ ನಿರ್ಮಾಣ ಆಗಬೇಕು ಎಂಬುದು ನಮ್ಮ ಆಸೆ’ ಎಂದರು.
ವಿಷ್ಣು ಸ್ಮಾರಕ ವಿವಾದ ಜೋರಾಗುತ್ತಿದ್ದಂತೆ ಅಭಿಮಾನ್ ಸ್ಟುಡಿಯೋದ ಮಾಲೀಕತ್ವ ಹೊಂದಿರುವ ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಪುತ್ರ ಗಣೇಶ್, “ವಿಷ್ಣು ಸಮಾಧಿ ನಿರ್ಮಾಣಕ್ಕೆ 50/150 ಅಳತೆಯ ಜಾಗವನ್ನು ಉಚಿತವಾಗಿ ನೀಡಲು ಸಿದ್ಧ’ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಗಣೇಶ್, “ಇಲ್ಲಿವರೆಗೆ ಈ ಸ್ಟುಡಿಯೋ ಮಾಲೀಕತ್ವದ ವಿವಾದ ಕೋರ್ಟ್‌ನಲ್ಲಿತ್ತು. ಈಗ ವ್ಯಾಜ್ಯ ಬಗೆಹರಿದಿದ್ದು, ಸಂಪೂರ್ಣ ಮಾಲೀಕತ್ವ ನನಗೆ ಬಂದಿದೆ. ಹಾಗಾಗಿ, ಸ್ಮಾರಕ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಉಚಿತವಾಗಿ ನೀಡಲಿದ್ದೇನೆ. ಆದರೆ, ಸರ್ಕಾರ ನಮಗೆ ಸಹಕಾರ ನೀಡಬೇಕು’ ಎಂದಿದ್ದಾರೆ.
Related Articles
ಮುಂದಾದ ಅಭಿಮಾನಿ
ವಿಷ್ಣು ಸ್ಮಾರಕ ನಿರ್ಮಾಣದ ವಿವಾದವನ್ನು ಕಂಡು ಬೇಸತ್ತ ಅಭಿಮಾನಿಯೊಬ್ಬರು ಮಂಡ್ಯದ ಶ್ರೀರಂಗಪಟ್ಟಣದ ಬಳಿ ಇರುವ ತನ್ನ ಜಮೀನಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡುವುದಾಗಿ ಹೇಳಿದ್ದಾರೆ. ವಿಷ್ಣು ಅಭಿಮಾನಿಯಾಗಿರುವ ಕೆ.ಸಿ.ಪಿ.ರಾಜಣ್ಣ ಅವರು ಈ ನಿರ್ಧಾರ ಕೈಗೊಂಡಿದ್ದು, ಸರ್ಕಾರ ಹಾಗೂ ವಿಷ್ಣು ಕುಟುಂಬ ಒಪ್ಪಿದರೆ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಬೀಳುವಷ್ಟು ಜಾಗ ನೀಡಲು ಸಿದ್ಧ ಎಂದಿದ್ದಾರೆ. ಈ ನಡುವೆಯೇ ವಿಷ್ಣುವರ್ಧನ್ ಅಭಿಮಾನಿಗಳು ಸ್ಮಾರಕಕ್ಕೆ ಬೇಕಾದ ಜಮೀನನ್ನು ತಾವೇ ಹಣ ಹೊಂದಿಸಿ ಖರೀದಿಸಲು ಸಿದ್ಧ ಎಂದು ಘೋಷಿಸಿದ್ದಾರೆ.
Advertisement