Advertisement

ವಿಷ್ಣು ಕಡಗ ಪುರಾಣ

10:25 AM Sep 15, 2019 | mahesh |

ಕೆಲ ವ್ಯಕ್ತಿಗಳ ಚರಿಷ್ಮಾ ಹೇಗಿರುತ್ತದೆ ಎಂದರೆ ಯಾವ ಕಾಲಕ್ಕೂ ಅವರು ಹುಟ್ಟು ಹಾಕಿದ ಟ್ರೆಂಡ್‌ ಜನಮಾನಸದಲ್ಲಿ ಉಳಿಯುತ್ತದೆ. ಅಂಥವರ ಸಾಲಿಗೆ ಸೇರುವ ನಟ ವಿಷ್ಣುವರ್ಧನ್‌. ಅವರ ಕೈಯಲ್ಲಿ ಫ‌ಳಗುಟ್ಟುತ್ತಿದ್ದ ಕಡಗಕ್ಕೂ ಒಂದು ಕತೆಯಿದೆ. ಅದೀಗ ಎಲ್ಲಿದೆ? ವಿಷ್ಣು ಅವರ ಜನ್ಮದಿನ (ಸೆ.18) ಸಮೀಪಿಸುತ್ತಿರುವ ಈ ವೇಳೆ, ಆ ಕಡಗದ ಒಂದು ನೆನಪು…

Advertisement

ಸಿನಿಮಾಗಳ ಪ್ರಭಾವ ಜನಸಾಮಾನ್ಯರ ಮೇಲೆ ಬಹಳವಾದುದು. ಸಿನಿಮಾ ಬಂದು ಹೋದ ನಂತರ ಆ ಸಿನಿಮಾದಲ್ಲಿ ಬಳಕೆಯಾದ ವಸ್ತುಗಳು, ವಸ್ತ್ರಗಳು ಹೊಸದೊಂದು ಟ್ರೆಂಡ್‌ಅನ್ನೇ ಹುಟ್ಟುಹಾಕುತ್ತವೆ. ಆ ಟ್ರೆಂಡ್‌ ಕೆಲ ಸಮಯವಷ್ಟೇ ಚಾಲ್ತಿಯಲ್ಲಿರುತ್ತದೆ. ಆದರೆ, ಕೆಲ ವ್ಯಕ್ತಿಗಳ ಚರಿಷ್ಮಾ ಹೇಗಿರುತ್ತದೆ ಎಂದರೆ ಯಾವ ಕಾಲಕ್ಕೂ ಅವರು ಹುಟ್ಟು ಹಾಕಿದ ಟ್ರೆಂಡ್‌ ಜನಮಾನಸದಲ್ಲಿ ಉಳಿಯುತ್ತದೆ. ಅಂಥವರ ಸಾಲಿಗೆ ಸೇರುವ ನಟ ವಿಷ್ಣುವರ್ಧನ್‌. ಅವರನ್ನು ಅನುಕರಿಸುವ ಅಷ್ಟೂ ಮಂದಿ ಮಾಡುವ ಸಾಮಾನ್ಯವಾದ ಅಭಿನಯ ಎಂದರೆ ಕೈ ಎತ್ತಿ, ಕಡಗವನ್ನು ತಿರುಗಿಸುವುದು.

ಸಿನಿಮಾಗಳಲ್ಲಿ ವಿಷ್ಣುವರ್ಧನ್‌ ಕಡಗ ತಿರುಗಿಸಿದರೆಂದರೆ ಮುಗಿಯಿತು. ಎದುರಾಳಿಗಳ ಧೂಳಿಪಟವಾಗುವುದು ಖಂಡಿತ ಎನ್ನುವುದು ಅಭಿಮಾನಿಗಳಿಗೆ ಗೊತ್ತಾಗಿಬಿಡುತ್ತಿತ್ತು. ಇಂದಿಗೂ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಕಡಗ ತೊಟ್ಟು ತಮ್ಮ ನೆಚ್ಚಿನ ನಾಯಕನಟನನ್ನು ಸಂಭ್ರಮಿಸುತ್ತಾರೆ. ಈ ಕಡಗ ಎಲ್ಲಿಂದ ಬಂತು? ಅದನ್ನು ವಿಷ್ಣುವರ್ಧನ್‌ ಅವರು ಮೊದಲು ತೊಟ್ಟಿದ್ದು ಯಾವಾಗ? ಮುಂತಾದ ಪ್ರಶ್ನೆಗಳು ಈ ಸಂದರ್ಭದಲ್ಲಿ ಏಳುವುದು ಸಹಜ. ವಿಷ್ಣು ಅವರು 80 ದಶಕಗಳಲ್ಲೇ ಕಡಗವನ್ನು ಧರಿಸಲು ಶುರುಮಾಡಿದ್ದರು. ಇನ್ನೂ ನಿಖರವಾಗಿ ಹೇಳಬೇಕೆಂದರೆ, 1980ರಲ್ಲಿ ಬಿಡುಗಡೆಯಾದ “ಸಿಂಹ ಜೋಡಿ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಕಡಗ ಧರಿಸಿದ್ದು.

ಆ ಕಡಗ ಅವರ ಕೈ ಸೇರಿದ್ದರ ಹಿಂದೆ, ಒಂದು ಕುತೂಹಲಕರ ಘಟನೆಯಿದೆ. ಅದೊಮ್ಮೆ ಸಿನಿಮಾ ಶೂಟಿಂಗ್‌ಗೆಂದು ವಿಷ್ಣು ಅವರು ಬೀದರ್‌ಗೆ ತೆರಳಿದ್ದರು. ಶೂಟಿಂಗ್‌ ನಡೆಯುತ್ತಿದ್ದ ಸ್ಥಳದ ಸಮೀಪದಲ್ಲೇ ಸಿಖ್ಬರ ಗುರುದ್ವಾರವಿತ್ತು. ಅಷ್ಟು ಸಾಕಾಗಿತ್ತು, ಅವರ ಗಮನ ಅತ್ತ ಸೆಳೆಯಲು. ಚಿತ್ರೀಕರಣ ಪ್ಯಾಕಪ್‌ ಆಗುವುದನ್ನೇ ಕಾಯುತ್ತಿದ್ದ ವಿಷ್ಣು ಅವರು ಗುರುದ್ವಾರಕ್ಕೆ ಹೋಗಿಬಿಟ್ಟರು. ಅವರಿಗೆ ಅಧ್ಯಾತ್ಮದಲ್ಲಿ ಎಷ್ಟು ಒಲವಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಿಲ್ಲ. ಅದೆಂಥಧ್ದೋ ಸೆಳೆತ ಅವರನ್ನು ಗುರುದ್ವಾರದೊಳಕ್ಕೆ ಕರೆತಂದಿತ್ತು. ಅಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದಂತೆಯೇ ಸಂತನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ಎದುರಾಗಿದ್ದರು. ವಿಷ್ಣು ಅವರಿಗೆ ಕಡೆಯವರೆಗೂ ಭೂಷಣವಾಗಿದ್ದ ಕಡಗವನ್ನು ನೀಡಿದ್ದು ಅವರೇ.

ಆ ಕಡಗದಲ್ಲಿ ಅದ್ಯಾವ ಶಕ್ತಿಯನ್ನು ವಿಷ್ಣು ಅವರು ಕಂಡರೋ ಗೊತ್ತಿಲ್ಲ, ಇನ್ಯಾವತ್ತೂ ಅವರದನ್ನು ಬಿಚ್ಚಿಡಲಿಲ್ಲ. ನಾವೆಲ್ಲರೂ ಒಂದಲ್ಲ ಒಂದು ವಸ್ತುವಿನಲ್ಲಿ ನಮ್ಮ ನಂಬಿಕೆಯನ್ನು ಹುದುಗಿಸಿಡುತ್ತೇವೆ. ಅದು ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಯುತ್ತೇವೆ. ಇದು ಕೂಡಾ ಹಾಗೆಯೇ. ಸದ್ಯ, ವಿಷ್ಣು ಅವರ ಕಡಗ ಈಗ ಅವರ ಮನೆಯಲ್ಲಿಯೇ ಭದ್ರವಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕ ಸಿದ್ಧಗೊಂಡಾಗ ಕಡಗವನ್ನು ಸ್ಮಾರಕದ ಬಳಿಯಲ್ಲಿಯೇ ಪ್ರದರ್ಶನಕ್ಕಿಡುವ ಇರಾದೆಯನ್ನು ಕುಟುಂಬಸ್ಥರು ಹೊಂದಿದ್ದಾರೆ.

Advertisement

– ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next