ಮುಂಬಯಿ : ಸ್ಪೇನ್‌ನಲ್ಲಿ ನಡೆದಿರುವ ಮಾರಣಾಂತಿಕ ದಾಳಿ, ಉತ್ತರ ಕೊರಿಯ – ಅಮೆರಿಕ ನಡುವಿನ ಸಮರೋತ್ಸಾಹ, ಭಾರತ – ಚೀನ ನಡುವೆ ಮುಂದುವರಿದಿರುವ ಸಿಕ್ಕಿಂ ಗಡಿ ಬಿಕ್ಕಟ್ಟು ಮುಂತಾಗಿ ಹಲವಾರು ಕಾರಣಗಳ ಫಲಶ್ರುತಿ ಎಂಬಂತೆ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ದೌರ್ಬಲ್ಯದ ಪ್ರವೃತ್ತಿಯನ್ನು ಅನುಲಕ್ಷಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 208 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಭಾರತೀಯ ಐಟಿ ದಿಗ್ಗಜ ಇನ್‌ಫೋಸಿಸ್ ಸಂಸ್ಥೆಯ ಎಂಡಿ ಮತ್ತು ಸಿಇಓ ಆಗಿರುವ ವಿಶಾಲ್ ಸಿಕ್ಕಾ ಅವರಿಂದು ತಮ್ಮ ಈ ಹುದ್ದೆಗಳಿಗೆ, ತತ್‌ಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿರುವ ಪರಿಣಾಮವಾಗಿ ಇನ್‌ಪೋಸಿಸ್ ಶೇರು ಶೇ.7.5ರಷ್ಟು ಕುಸಿಯಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನೆಕ್ಸ್ 226.73 ಅಂಕಗಳ ನಷ್ಟದೊಂದಿಗೆ 31,568.73 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57.60 ಅಂಕಗಳ ನಷ್ಟದೊಂದಿಗೆ 9,846.55 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಫೋಸಿಸ್, ಟಿಸಿಎಸ್, ಐಟಿಸಿ, ವೇದಾಂತ, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು
ಟಾಪ್ ಗೇನರ್‌ಗಳಾಗಿ ಭಾರ್ತಿ ಇನ್‌ಫ್ರಾಟೆಲ್, ಐಡಿಯಾ ಸೆಲ್ಯುಲರ್ , ಗೇಲ್, ಅಲ್‌ಟ್ರಾ ಟೆಕ್‌ಸಿಮೆಂಟ್, ಬಿಪಿಸಿಎಲ್ ಶೇರುಗಳು ವಿಜೃಂಭಿಸಿದರೆ, ಟಾಪ್ ಲೂಸರ್‌ಗಳಾಗಿ ಇನ್‌ಫೋಸಿಸ್, ಝೀ ಎಂಟರ್‌ಟೇನ್‌ಮೆಂಟ್, ಸನ್ ಫಾರ್ಮಾ, ಎಚ್‌ಡಿಎಫ್ಸಿ, ಟಾಟಾ ಪವರ್ ಶೇರುಗಳು ಹಿನ್ನಡೆಗೆ ಗುರಿಯಾದವು.