ಬೆಂಗಳೂರು: ಇನ್ಫೋಸಿಸ್ ಸಿಇಒ ಹಾಗೂ ಆಡಳಿತ ನಿರ್ದೇಶಕ ವಿಶಾಲ್ ಸಿಕ್ಕಾ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ನಡುವೆ ಭಿನ್ನಾಭಿಪ್ರಾಯ ಗೊತ್ತಿರುವ ವಿಚಾರವೇ, ಆದರೆ ಇದೀಗ ಇನ್ಫೋಸಿಸ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ಹುದ್ದೆಯಿಂದ ಕೆಳಗಿಳಿದಿರುವ ಸಿಕ್ಕಾ ನಾರಾಯಣ ಮೂರ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕ ಇಬ್ಬರ ನಡುವಿನ ಒಳಜಗಳವನ್ನು ಜಗಜ್ಜಾಹೀರುಪಡಿಸಿದ್ದಾರೆ.
ಸಂಸ್ಥೆಯಿಂದ ಕೆಲಸ ತೊರೆಯುತ್ತಿದ್ದ ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡುತ್ತಿದ್ದ ಬಗ್ಗೆ ಇನ್ಫೋಸಿಸ್ ಆಡಳಿತ ಮಂಡಳಿ ಹಾಗೂ ಸ್ಥಾಪಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಷ್ಟೇ ಅಲ್ಲ ವಿಶಾಲ್ ಸಿಕ್ಕಾ ರಾಜೀನಾಮೆಗೆ ನಾರಾಯಣ ಮೂರ್ತಿ ಅವರ ನಿರಂತರ ಕಿರಿಕಿರಿಯೇ ಕಾರಣ ಎಂದು ಇನ್ಫೋಸಿಸ್ ಆಡಳಿತ ಮಂಡಳಿ ಕೂಡಾ ದೂರಿದೆ.
ಸಿಕ್ಕಾ ಅವರು ಇನ್ಫೋಸಿಸ್ ಆಡಳಿತ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹಲವಾರು ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಇದರ ವಿರುದ್ಧ ಅಸಮಾಧಾನಗೊಂಡಿದ್ದ ನಾರಾಯಣ ಮೂರ್ತಿ ಅವರು ಸಿಕ್ಕಾ ವಿರುದ್ಧ ಪತ್ರ ಚಳವಳಿ ನಡೆಸಿದ್ದರು.
ಕ್ಯಾಲಿಫೋರ್ನಿಯಾ ಮೂಲದ ಟೆಕ್ಕಿ ವಿಶಾಲ್ ಸಿಕ್ಕಾ ಅವರು ಶುಕ್ರವಾರ ಅಚ್ಚರಿಯ ಬೆಳವಣಿಗೆ ಎಂಬಂತೆ ದಿಢೀರ್ ರಾಜೀನಾಮೆ ನೀಡಿದ್ದಾರೆ. 50ರ ಹರೆಯದ ಸಿಕ್ಕಾ ಅವರು ಮೂರು ವರ್ಷಗಳ ಹಿಂದೆ ಇನ್ಫೋಸಿಸ್ ಆಡಳಿತ ನಿರ್ದೇಶಕ ಹಾಗೂ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಸ್ಥೆಯ ಆದಾಯ ಶೇ.25ರಷ್ಟು ಹೆಚ್ಚಳವಾಗಿದೆ.
ಇನ್ಫೋಸಿಸ್ ಭಾರತದ ನಂ 2 ಸಾಫ್ಟ್ ವೇರ್ ರಫ್ತು ಕಂಪನಿಯಾಗಿದೆ. ಇಂಟರ್ನೆಟ್, ಡಾಟಾ ಬೇಸ್ ಕಂಪನಿಯಾಗಿ ಬೆಳೆದಿರುವ ಇನ್ಫೋಸಿಸ್ ಗೆ ಟಾಟಾ ಕನ್ಸ್ ಲ್ಟೆನ್ಸಿ ಸರ್ವಿಸ್ ಲಿಮಿಟೆಡ್ ಪ್ರಬಲ ಪ್ರತಿಸ್ಫರ್ಧಿ ಕಂಪನಿಯಾಗಿತ್ತು.
ಇಂತಹ ಸ್ಪರ್ಧಾತ್ಮಕ ಬೆಳವಣಿಗೆಯ ನಡುವೆ ಸಿಕ್ಕಾ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಏತನ್ಮಧ್ಯೆ ಮುಖ್ಯ ಚೀಫ್ ಆಪರೇಟಿಂಗ್ ಅಧಿಕಾರಿ ಪ್ರವೀಣ್ ರಾವ್ ಅವರನ್ನು ಇನ್ಫೋಸಿಸ್ ಸಂಸ್ಥೆಯ ಮಧ್ಯಂತರ ಸಿಇಒ ಆಗಿ ನೇಮಕ ಮಾಡಲಾಗಿದೆ.