ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ಆಶ್ರಯದಲ್ಲಿ ನಡೆದ ನಾದ ವಸಂತ ಸಂಗೀತೋತ್ಸವದಲ್ಲಿ ಕಿರಾಣಾ ಘರಾಣೆಯ ಪಂ. ಕೈವಲ್ಯ ಕುಮಾರ್ ಗುರವ್‌ರ ಶಿಷ್ಯರಾಗಿರುವ ವಿಶಾಲ್ ಮಹರ್ ಗುಡೆ, ಔರಂಗಾಬಾದ್ ಇವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಛೇರಿ ನಡೆಯಿತು. ರಾಗ ಮಧುವಂತಿಯಲ್ಲಿ ಕಛೇರಿಯನ್ನು ಪ್ರಾರಂಭಿಸಿದ ವಿಶಾಲ್ ಮಧುಬನಮೇ ಬಾಜತ ಮುರಲಿ ವಿಲಂಬಿತ ಏಕ್ ತಾಲ್ ಖ್ಯಾಲ್ ಪ್ರಸ್ತುತ ಪಡಿಸಿದರು. ಧೃತ್ ತೀನ್ ತಾಲ್‌ನಲ್ಲಿ ಸಾವರಿಯಾ ತುಮಬಿನ ಮೋಹೆ, ಧೃತ್ ಏಕ್ ತಾಲ್‌ನಲ್ಲಿ ನಂದಮೋರೆ ಲಾಲತುಮ ಬಂದಿಶ್ ಹಾಡಿ ಸುಮಧುರ ಧ್ವನಿ ಮತ್ತು ನಿರರ್ಗಳ ತಾನ್‌ಗಳ ಮೂಲಕ ಮನಗೆದ್ದರು. ಅಂತ್ಯದಲ್ಲಿ ಹಾಡಿದ ಮಾಲಕಂಸ ರಾಗದ ಮರಾಠಿ ಅಭಂಗ ಪ್ರಸ್ತುತಿಯಿಂದ ಲಘು ಸಂಗೀತದಲ್ಲೂ ಪರಿಣತಿಯನ್ನು ಪ್ರದರ್ಶಿಸಿದರು. ತಬಲಾದಲ್ಲಿ ಶ್ರೀಧರ್ ಮಾಂಡ್ರೆ, ಹಾರ್ಮೋನಿಯಂನಲ್ಲಿ ಅಮಿತ್ ಕುಮಾರ್, ತಾನ್ಪುರದಲ್ಲಿ ಪ್ರತಾಪ್ ಕುಮಾರ್ ಮತ್ತು ಆತ್ರೇಯ ಸಹಕರಿಸಿದರು.