ಚೆನ್ನೈ: ತಮಿಳುನಾಡಿನ ಆರ್.ಕೆ. ನಗರ ವಿಧಾನಸಭೆ ಕ್ಷೇತ್ರಕ್ಕೆ ಡಿ.21ರಂದು ನಡೆಯಲಿರುವ ಉಪ ಚುನಾವಣೆಗೆ ನಟ ವಿಶಾಲ್ ಕೃಷ್ಣ ಸಲ್ಲಿಸಿದ್ದ ನಾಮಪತ್ರ ಬುಧವಾರ ಮತ್ತೆ ತಿರಸ್ಕೃತಗೊಂಡಿದೆ. ಮಂಗಳವಾರ ಮೊದಲು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದರೂ, ರಾತ್ರಿ ವೇಳೆಗೆ ನಾಮಪತ್ರ ಅಂಗೀಕೃತವಾಗಿದೆ ಎಂದು ವಿಶಾಲ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. ಆದರೆ, ಬುಧವಾರ ಮತ್ತೆ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ವಿಶಾಲ್, ಮುಖ್ಯ ಚುನಾವಣಾಧಿಕಾರಿ ಯನ್ನು ಭೇಟಿಯಾಗಿ, ತಮ್ಮ ನಾಮಪತ್ರ ತಿರಸ್ಕಾರವನ್ನು ಮರು ಪರಿಶೀಲಿಸುವಂತೆ ಕೋರಿದ್ದಾರೆ. ಅಲ್ಲದೇ, ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ್‌ರಿಗೂ ಈ ಕುರಿತು ಟ್ವೀಟ್ ಮಾಡಿದ್ದು, ನ್ಯಾಯ ಒದಗಿಸುವಂತೆ ಕೋರಿದ್ದಾರೆ. ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್‌ರನ್ನು ಭೇಟಿಯಾಗಿ ದೂರು ನೀಡುವುದಾಗಿಯೂ ಹೇಳಿಕೊಂಡಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನಿಂದ ತೆರವಾಗಿರುವ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.