ಮುಂಬಯಿ : ಸುಲ್ತಾನ್, ಬಾಜಿರಾವ್ ಮಸ್ತಾನಿ ಮತ್ತು ಸ್ಟೂಡೆಂಟ್ ಆಫ್ ದಿ ಇಯರ್ ಮೊದಲಾದ ಸೂಪರ್ ಹಿಟ್ ಬಾಲಿವುಡ್ ಚಿತ್ರಗಳಿಗೆ ಸೌಂಡ್ ಟ್ರ್ಯಾಕ್ ನೀಡುವ ಮೂಲಕ ಸಂಗೀತ ಪ್ರಿಯರ ಮನೆಮನಗಳಲ್ಲಿ ಹೆಸರುವಾಸಿಯಾಗಿರುವ ವಿಶಾಲ್ ದದ್ಲಾನಿ, ಪತ್ನಿ ಪ್ರಿಯಾಲಿಗೆ ಡೈವೋರ್ಸ್ ನೀಡಲು ಅರ್ಜಿ ಹಾಕುವ ಮೂಲಕ ಸುದ್ದಿ ಮಾಡಿದ್ದಾರೆ.
ತಮ್ಮ ಖಾಸಗಿ ಬದುಕನ್ನು ಸದಾಕಾಲ ಖಾಸಗಿಯಾಗಿಯೇ ಇಟ್ಟುಕೊಂಡಿದ್ದ 43ರ ಹರೆಯದ ವಿಶಾಲ್ ದದ್ಲಾನಿ ಕೆಲವು ವರ್ಷಗಳ ಹಿಂದೆ ಪ್ರಿಯಾಲಿಯನ್ನು ಮದುವೆಯಾಗಿದ್ದಾಗ ಆ ಸುದ್ದಿಯನ್ನು ಕೂಡ ಬಹುಕಾಲ ರಹಸ್ಯವಾಗಿ ಇರಿಸಿಕೊಂಡಿದ್ದರು. ಪತ್ನಿ ಪ್ರಿಯಾಲಿ ಹಾಗೂ ಕುಟುಂಬ ಸದಸ್ಯರೊಂದಿಗಿನ ತಮ್ಮ ಯಾವುದೇ ಫೋಟೋಗಳನ್ನು ಅವರು ಎಂದೂ ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತಿರಲಿಲ್ಲ.
ಈಚೆಗೆ ಹಲವು ವರ್ಷಗಳಿಂದ ವಿಶಾಲ್ – ಪ್ರಿಯಾಲಿ ಪರಸ್ಪರರಿಂದ ಪ್ರತ್ಯೇಕಗೊಂಡು ವಾಸಿಸುತ್ತಿದ್ದರು. ಇದೀಗ ಅಧಿಕೃತ ವಿಚ್ಛೇದನಕ್ಕೆ ಈ ದಂಪತಿ ಅರ್ಜಿ ಹಾಕಿದ್ದಾರೆ.
“ಇದು ನಮ್ಮ ಖಾಸಗಿ ಬದುಕು; ನಾವು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದೇವೆ. ಈ ಬಗ್ಗೆ ಇನ್ನೆನನ್ನೂ ಕೇಳಬೇಡಿ; ನಮ್ಮ ಖಾಸಗಿತನವನ್ನು ದಯವಿಟ್ಟು ಗೌರವಿಸಿ’ ಎಂದು ವಿಶಾಲ್ ಹೇಳಿಕೆಯೊಂದರಲ್ಲಿ ಕೋರಿದ್ದಾರೆ.
‘ಪ್ರಿಯಾಲಿ ಜತೆಗಿನ ನನ್ನ ಮಿತೃತ್ವ ಈ ಹಿಂದೆಂದಿಗಿಂತಲೂ ಈಗ ಅಮೋಘವಾಗಿದೆ; ನಾವು ಪರಸ್ಪರರಿಂದ ದೂರವಿದ್ದು ಪ್ರತ್ಯೇಕವಾಗಿ ವಾಸವಾಗಿದ್ದ ಇಷ್ಟು ವರ್ಷಗಳ ಕಾಲವೂ ನಾವು ಅತ್ಯುತ್ತಮ ಸ್ನೇಹಿತರಾಗಿ ಇದ್ದೇವೆ; ನಮ್ಮ ಎರಡೂ ಕುಟುಂಬಗಳು ಉತ್ತಮ ಅನ್ಯೋನ್ಯತೆಯನ್ನು ಹೊಂದಿವೆ’ ಎಂದು ವಿಶಾಲ್ ಹೇಳಿದ್ದಾರೆ.