Advertisement

ಬಾವಿಗಳಲ್ಲಿ ವಿಷಾನಿಲವಿರಬಹುದು; ಮುಂಜಾಗ್ರತೆ ವಹಿಸಿ

12:07 PM Apr 19, 2017 | Team Udayavani |

ಮಹಾನಗರ: ಎಲ್ಲೆಡೆ ಈಗ ಕೆರೆ- ಬಾವಿಗಳು ಬತ್ತಿ ಹೋಗಿ, ಅದರಲ್ಲಿ ತುಂಬಿಕೊಂಡಿ ರುವ ಕೆಸರು ತೆಗೆದು ಸ್ವತ್ಛಗೊಳಿಸುವ ಕಾರ್ಯ ಆರಂಭವಾಗಿದೆ. ಆದರೆ, ಈ ಸಂದರ್ಭದಲ್ಲಿ ವಿಷಾನಿಲ ಸೇವಿಸಿ ಅಮಾಯಕ ಜೀವಗಳು ಬಲಿಯಾದ ದುರ್ಘ‌ಟನೆಗಳು ಹಲವಾರು ಇವೆ. ಹೀಗಾಗಿ, ಹೂಳು ತೆಗೆಯಲು ಕೆರೆ-ಬಾವಿಗಳಿಗೆ ಇಳಿಯುವ ಮುನ್ನ ಎಚ್ಚರವಿರಲಿ.

Advertisement

ಬೇಸಗೆಯಲ್ಲಿ ನೀರಿಲ್ಲದೇ ಬತ್ತಿದ ಬಾವಿಗಳಲ್ಲಿ ಎಷ್ಟು ಅಡಿ ಆಳಕ್ಕೆ ಹೂಳು ತುಂಬಿರುತ್ತದೆ ಎಂಬುವುದನ್ನು ಊಹಿಸುವುದು ಅಸಾಧ್ಯ. ಕೆಸರಿನ ಮೇಲೆ ಕಸ-ಕಡ್ಡಿ ಮತ್ತು ತರಗೆಲೆ ಬಿದ್ದು ಮುಚ್ಚಿಕೊಂಡಿರುತ್ತದೆ. ಮಳೆಗಾಲ ಆರಂಭದ ಮೊದಲು ಬಾವಿಗಳ ಕೆಸರು ತೆಗೆದು ಸ್ವತ್ಛಗೊಳಿಸ ದಿದ್ದರೆ, ನೀರಿನ ಒರತೆ ಹೆಚ್ಚದು. ಆದರೆ ಕೆಸರಿನ ಜತೆಗೆ ಕಸ-ಕಡ್ಡಿ ಕೊಳೆತು ರಾಸಾಯನಿಕ ಕ್ರಿಯೆಗೆ ಒಳಗಾಗಿ ವಿಷಾನಿಲ ಸೃಷ್ಟಿಯಾಗಿರುತ್ತದೆ. ಈ ಬಗ್ಗೆ ಜನರಿಗೆ ಸೂಕ್ತ ಅರಿವಿಲ್ಲದ್ದರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹಾನಿ ಸಂಭವಿಸಿದ ನಿದರ್ಶನಗಳಿವೆ. 

ಸಾಮಾನ್ಯವಾಗಿ ಅಳ ಜಾಸ್ತಿ ಇರುವ ಬಾವಿಗಳಲ್ಲಿ  ಅಪಾಯ ಅಧಿಕ. ಕರಾವಳಿ  ಜಿಲ್ಲೆಗಳ ಒಳಪ್ರದೇಶಗಳಲ್ಲಿ  ಬಾವಿಗಳು ಸುಮಾರು 100 ಅಡಿಗಿಂತಲೂ ಅಧಿಕ ಆಳವನ್ನು ಹೊಂದಿರುತ್ತವೆ. ಮೇಲಿನಿಂದ ಮಣ್ಣು  ಬಿದ್ದು  ಅಥವಾ ತಳದಲ್ಲೇ ಕೆಸರು ಸಂಗ್ರಹವಾಗುತ್ತದೆ. ಒಂದಷ್ಟು ವರ್ಷಗಳು ಕಳೆದ ಮೇಲೆ ಒರತೆಗೆ ಇದು ಅಡ್ಡಿಯಾಗಿ ನೀರು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ನಿಂತು ಬಿಡುತ್ತದೆ. ತಳವನ್ನು  ಸ್ವತ್ಛಗೊಳಿಸಿದರೆ  ಒರತೆ ಉಕ್ಕಲು ಸಾಧ್ಯ.

ಎಪ್ರಿಲ್‌, ಮೇ ತಿಂಗಳಿನಲ್ಲಿ  ಮನೆಯವರು ತಾವೇ ಸ್ವತಃ ಇಳಿದು ಬಾವಿಯನ್ನು ಸ್ವತ್ಛಗೊಳಿಸುತ್ತಾರೆ ಅಥವಾ ಕೂಲಿಯಾಳುಗಳನ್ನು ಕರೆಸಿ ಅವರಿಂದ ಹೂಳು ತೆಗೆಸುತ್ತಾರೆೆ. ಒಂದುವೇಳೆ, ಬಾವಿ ನೀರು ಉಪಯೋಗಿಸದೇ ಹಾಗೆಯೇ ಬಿಟ್ಟಿದ್ದರೆ ಅಥವಾ ಬಹಳಷ್ಟು  ವರ್ಷಗಳಿಂದ ಕಸ-ಕಡ್ಡಿ  ಮುಂತಾದ ತ್ಯಾಜ್ಯವಿದ್ದಿದ್ದರೆ ಕ್ರಮೇಣ ಅದು ವಿಷಾನಿಲ ಉತ್ಪತ್ತಿಗೆ ಕಾರಣವಾಗುತ್ತದೆ.

ಅರಿವಿಲ್ಲದೆ ಅನಾಹುತ
ಹೆಚ್ಚು  ಆಳದ ಬಾವಿ  ತಳದಲ್ಲಿ  ವಿಷಾನಿಲ  ಒಂದೆಡೆಯಾದರೆ,  ಇನ್ನೊಂಡೆಡೆ ಆಮ್ಲಜನಕದ ಕೊರತೆಯೂ  ಇರುತ್ತದೆ. ಬಾವಿಗೆ ಇಳಿದ ಕೂಡಲೇ ಇದರಿಂದ ವ್ಯಕ್ತಿಗೆ ಉಸಿರಾಟದ ತೊಂದರೆ ತಲೆದೋರಿ ಪ್ರಜ್ಞೆ ತಪ್ಪಿ ಅಸ್ವಸ್ಥಕ್ಕೆ ಒಳಗಾಗ ಬಹುದು. ಈ ಸಂದರ್ಭದಲ್ಲಿ  ಅವರಿಗೆ ತುರ್ತು ಚಿಕಿತ್ಸೆ  ಅವಶ್ಯವಿರುತ್ತದೆ. ಅವರನ್ನು  ತತ್‌ಕ್ಷಣ  ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಬಾವಿಗೆ ಒಳಗಿರುವ ಮಂದಿ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತಿರುವುದನ್ನು ಕಂಡು ಇವರನ್ನು  ರಕ್ಷಿಸಲು ಮೇಲೆ ಇದ್ದವರೂ ಗಾಬರಿಯಿಂದ ಬಾವಿಗೆ ಇಳಿಯುತ್ತಾರೆ. ಪ್ರಜ್ಞೆ ತಪ್ಪಿರಬೇಕು ಎಂದು  ನೆರವಿಗೆ ಧಾವಿಸುತ್ತಾರೆ. ಪರಿಣಾಮ ಅವರೂ ಅಸ್ವಸ್ಥರಾಗಬಹುದು. ಇನ್ನು  ಹೆಚ್ಚಿನ ಪ್ರಮಾಣದಲ್ಲಿ  ಕೆಸರಿದ್ದರೆ ಅದರಲ್ಲಿ  ಹೂತುಹೋಗುವ ಅಪಾಯವಿದ್ದು, ಉಸಿರುಕಟ್ಟಿ ಸಾವು ಸಂಭವಿಸುವ ಸಂದರ್ಭವೂ ಇವೆ.  

Advertisement

ಅನಾಹುತವಾದರೆ ತಕ್ಷಣ ಕರೆ ಮಾಡಿ
ಬಾವಿಗೆ ಇಳಿಯಲು ಮತ್ತು ಕೆಸರು ತೆಗೆಯಲು  ಎಲ್ಲರಿಂದಲೂ ಸಾಧ್ಯವಿಲ್ಲ. ಇದಕ್ಕೆ  ಅನುಭವಬೇಕು. ಅನುಭವಿಗಳು ಬಾವಿಯ ಸ್ಥಿತಿ- ಗತಿಯನ್ನು ಮೊದಲೇ ಅಂದಾಜಿಸುತ್ತಾರೆ. ಆದರೆ, ಅವರಿಗೆ  ಹೆಚ್ಚಿನ ಸಂಬಳ ನೀಡಬೇಕು. ಪ್ರಸ್ತುತ  ಕೂಲಿಯಾಳುಗಳ  ಅಭಾವದ ಸಮಯ.  ಅನುಭವ ಇಲ್ಲದಿದ್ದರೂ ಹೆಚ್ಚಿನ ಸಂಬಳದ ಆಕರ್ಷಣೆಯಿಂದ ಬಾವಿಗೆ ಇಳಿಯುತ್ತಾರೆ. ಒಂದೊಮ್ಮೆ, ಇಂತಹ  ಅನಾಹುತ ಸಂಭವಿಸಿದರೆ ಮೇಲೆ ಇದ್ದವರು ಬಾವಿಗಿಳಿಯದೇ ಕೂಡಲೇ 101 ನಂಬರ್‌ ಡಯಲ್‌ ಮಾಡಿ  ಆಗ್ನಿಶಾಮಕದಳವರಿಗೆ ಮಾಹಿತಿ ಕೊಡಬೇಕು. ಅವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ  ನಡೆಸುತ್ತಾರೆ. ಅವರಲ್ಲಿ ಉಸಿರಾಟಕ್ಕೆ ಬಳಸುವ ಸಾಧನಗಳಿರುತ್ತವೆ. ಇದಲ್ಲದೆ ಪೈಪ್‌ ಮೂಲಕ ಬಾವಿಯೊಳಗೆ  ಆಮ್ಲಜನಕ ಸರಬರಾಜು ಮಾಡುತ್ತಾರೆ. ಜೀವ ರಕ್ಷಕ  ಸಾಧನಗಳ ಮೂಲಕ  ಬಾವಿಯೊಳಗೆ ಸಿಲುಕಿದವರನ್ನು  ಮೇಲಕ್ಕೆ ತರುತ್ತಾರೆ. 

ಬಾವಿಗೆ ಇಳಿಯುವ ಮೊದಲು ಏನು ಮಾಡಬೇಕು
ಜ ಬಾವಿಗೆ ಇಳಿಯುವ ಮೊದಲು  ಅದರಲ್ಲಿ ವಿಷಾನಿಲ ಅಥವಾ  ಆಮ್ಲಜನಕದ ಕೊರತೆ ಇದೆಯೇ ಎಂಬ ಬಗ್ಗೆ  ಪರೀಕ್ಷಿಸಿಕೊಳ್ಳಬೇಕು.
ಜ ಬಕೆಟೊಂದರಲ್ಲಿ  ದೀಪ ಅಥವಾ ಕ್ಯಾಂಡಲ್‌ ಉರಿಸಿಟ್ಟು  ಬಾವಿಗೆ ಇಳಿಸಬೇಕು.  ದೀಪ ಆರಿದರೆ ಅಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆ ಎಂದರ್ಥ. 

ಇಂಥ ಸಂದರ್ಭದಲ್ಲಿ  ಬಾವಿಗೆ ಇಳಿಯುವಾಗಲೇ ಇದರ ಮುನ್ಸೂಚನೆ ಕಂಡುಬರುತ್ತದೆ.  ಅರ್ಧಕ್ಕೆ ಹೋಗುವಷ್ಟರಲ್ಲಿ ಕಣ್ಣು ಉರಿ ಹಾಗೂ ಕೈಕಾಲು ನಡುಗಲು ಪ್ರಾರಂಭವಾಗುತ್ತದೆ. ಇಂತಹ ಅನುಭವವಾದರೆ ವಾಪಸು ಮೇಲಕ್ಕೆ ಬರುವುದು ಸೂಕ್ತ.

ವಿಷಾನಿಲ ಇದ್ದರೆ  ಮೇಲಿನಿಂದ  ಬಾವಿಗೆ ನೀರು ಹಾಕಬೇಕು. ಆಗ ವಿಷಾನಿಲಗಳು ಮೇಲಕ್ಕೆ  ಬರುತ್ತದೆ.  ಮೇಲಿನಿಂದ  ಹಸಿರು ಎಲೆಗಳಿರುವ ಮರದ ಗೆಲ್ಲುಗಳನ್ನು ಹಾಕಿದರೆ ಆಮ್ಲಜನಕದ ಕೊರತೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತದೆ ಎನ್ನುತ್ತಾರೆ ಅಗ್ನಿಶಾಮಕ ದಳದ ತಜ್ಞರು.

ಅಪಾಯಕಾರಿ ಪರಿಸ್ಥಿತಿಯಲ್ಲಿ  ಅಗ್ನಿಶಾಮಕ ದಳದ 101 ನಂಬರ್‌ಗೆ ಡಯಲ್‌ ಮಾಡಿ ಮಾಹಿತಿ ನೀಡಬೇಕು.

ಆಮ್ಲಜನಕದ ಕೊರತೆ
ಆಳದ ಅಥವಾ ಉಪಯೋಗಿಸದ, ಬಹಳಷ್ಟು  ವರ್ಷಗಳಿಂದ ಸ್ವತ್ಛಗೊಳಿಸದ  ಬಾವಿಗಳಲ್ಲಿ  ಆಮ್ಲಜನಕದ ಕೊರತೆ ಅಥವಾ ತ್ಯಾಜ್ಯಗಳು ಕೊಳೆತು ಮಿಥೇನ್‌ ಅನಿಲ ಇರುತ್ತದೆ. ಇವುಗಳಿಗೆ ಇಳಿಯುವಾಗ ಮುಂಜಾಗ್ರತೆ ವಹಿಸಿಬೇಕು. ಅಮ್ಲಜನಕ ಕೊರತೆ ಅಥವಾ ಮಿಥೇನ್‌ ಅನಿಲ ಇಲ್ಲವೆಂಬುದನ್ನು  ಖಾತ್ರಿ ಪಡಿಸಿ ಕೊಂಡು ಅನಂತರ ಬಾವಿಗೆ ಇಳಿಯಬೇಕು. ಇಳಿಯುವಾಗ ಸೊಂಟಕ್ಕೆ ಹಗ್ಗ ಕಟ್ಟಿ  ಅದರ ತುದಿಯನ್ನು ಮೇಲೆ ಇರುವವರ ಕೈಯಲ್ಲಿ ಕೊಡ ಬೇಕು. ಅರ್ಧಕ್ಕೆ ಹೋಗುವಾಗ ಉಸಿರುಕಟ್ಟಿದ ಅನುಭವ ಆದರೆ ಮುಂದಕ್ಕೆ ಹೋಗಬಾರದು. 
ಶಿವಶಂಕರ್‌, ಮುಖ್ಯ ಆಗ್ನಿಶಾಮಕ ಅಧಿಕಾರಿ ಮಂಗಳೂರು

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next