Advertisement

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶನ್‌-05 ಕಾರ್ಯಕ್ರಮ

11:38 AM Mar 03, 2020 | Suhan S |

ದಾವಣಗೆರೆ: ಜಿಲ್ಲೆಯಲ್ಲಿ 2019-20ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶನ್‌-05 ಕಾರ್ಯಕ್ರಮ ರೂಪಿಸಿದೆ.

Advertisement

ಈ ಬಾರಿಯ ಎಸ್‌.ಎಸ್‌.ಎಲ್‌.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ 5ರ ಒಳಗಿನ ಸ್ಥಾನ ಪಡೆದೇ ತೀರುವ ನಿಟ್ಟಿನಲ್ಲಿ ವಿಶನ್‌-05… ಕಾರ್ಯಕ್ರಮದಡಿ ಶಿಕ್ಷಣ ಇಲಾಖೆ ಹಲವಾರು ರಚನಾತ್ಮಕ ಕಾರ್ಯಕ್ರಮ ರೂಪಿಸುವ ಜೊತೆಗೆ ಫಲಿತಾಂಶ ಹೆಚ್ಚಳದತ್ತ ಕಾರ್ಯಪ್ರವೃತ್ತವಾಗಿದೆ. ಎಲ್ಲಾ ಶಾಲಾ ಹಂತದಲ್ಲಿಯೇ ಎಸ್‌.ಎಸ್‌. ಎಲ್‌.ಸಿ. ಕಲಿಕಾ ಗುಣಮಟ್ಟ ಹೆಚ್ಚಳದ ಜೊತೆಗೆ ಫಲಿತಾಂಶ ಸುಧಾರಣೆಗೆ ರೂಪಿಸಿರುವ ವಿಶನ್‌-05 ಕಾರ್ಯಕ್ರಮದಡಿ ಫೋನ್‌ ಇನ್‌, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ರಾತ್ರಿ ತರಗತಿ, ದತ್ತು ಯೋಜನೆಯ ಸಮರ್ಪಕ ಅನುಷ್ಠಾನ, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾರು ಮಾರ್ಗದರ್ಶನ, ಪರೀಕ್ಷಾ ಕೇಂದ್ರವಾರು ವಿಶೇಷ ತರಗತಿ ಆಯೋಜನೆ, ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವುದು, ಜಿಲ್ಲಾ ಹಂತದಲ್ಲಿ ಪ್ರಶ್ನೆಪತ್ರಿಕೆ ವಿತರಣೆ, ಉರ್ದು ವಿಭಾಗಗಳ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.

2018-19ನೇ ಸಾಲಿನಲ್ಲಿ ಜಿಲ್ಲೆಯ ಎಸ್‌.ಎಸ್‌. ಎಲ್‌.ಸಿ. ಫಲಿತಾಂಶ ಶೇ.86.28 ಪ್ರಮಾಣದೊಂದಿಗೆ ರಾಜ್ಯದಲ್ಲಿ 9 ನೇ ಸ್ಥಾನದಲ್ಲಿದೆ. 2017-18ನೇ ಸಾಲಿನಲ್ಲಿ ಜಿಲ್ಲೆ 15 ಸ್ಥಾನದಲ್ಲಿದ್ದುದು ಗಮನಾರ್ಹ. ಕಳೆದ ಸಾಲಿನಲ್ಲಿ ಶೇ.69.04 ರಷ್ಟು ವಿದ್ಯಾರ್ಥಿಗಳು ಶೇ.60ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದನ್ನು ಗಮನದಲ್ಲಿಟ್ಟು ಕೊಂಡಿರುವ ಶಿಕ್ಷಣ ಇಲಾಖೆ ವಿಶನ್‌-05 ಕಾರ್ಯಕ್ರಮದಡಿ ಈ ಬಾರಿ ಶೇ.80ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಶೇ.80ಕ್ಕಿಂತಲೂ ಹೆಚ್ಚಿನ ಅಂಕ ಗಳಿಸುವಂತಾಗಲು ಹಲವಾರು ಕಾರ್ಯಕ್ರಮ ರೂಪಿಸಿದೆ.

ವಿಶನ್‌-05 ಕಾರ್ಯಕ್ರಮದಡಿ ಫೋನ್‌ ಇನ್‌ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಇಂಗ್ಲಿಷ್‌ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದಲ್ಲಿ ಕೂಡಲೇ ಸಂಬಂಧಿತ ಶಿಕ್ಷಕರಿಗೆ ಕರೆ ಮಾಡಿ, ಇಂತಹದ್ದು ಅರ್ಥವಾಗುತ್ತಿಲ್ಲ… ಎಂದು ಹೇಳಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ದಾವಣಗೆರೆ ದಕ್ಷಿಣ ವಲಯದಲ್ಲಿ ಫೋನ್‌-ಇನ್‌ ಕಾರ್ಯಕ್ರಮಕ್ಕೆ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ಗುರಿಯ ವಿಶನ್‌ -05 ಅಡಿ ಸಂವಾದ ಮತ್ತೂಂದು ಕಾರ್ಯಕ್ರಮ ದಾವಣಗೆರೆ ದಕ್ಷಿಣ ವಲಯದ 13 ಕಡೆ ಈವರೆಗೆ ಸಂವಾದ ನಡೆಸಲಾಗಿದೆ. ವಿಷಯವಾರು ತಜ್ಞರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿದ್ಯಾರ್ಥಿಗಳು ಮುಕ್ತವಾಗಿ ಸಂವಾದ ನಡೆಸಬಹುದು. ಸಂವಾದದ ವಿಶೇಷವೆಂದರೆ, ಯಾವುದೇ ವಿದ್ಯಾರ್ಥಿ ನಿರ್ದಿಷ್ಟ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳಬಹುದು. ಇಂತಹ ಲೆಕ್ಕ, ವಿಷಯ ಅರ್ಥವಾಗಿಲ್ಲ ಎಂದು ತಿಳಿಸಿದರೆ, ಆ ಸಮಸ್ಯೆಗೆ ಮಾತ್ರವೇ ಸೀಮಿತವಾಗಿ ಪರಿಹಾರ ನೀಡಲಾಗುವುದು. ಹಾಗಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಗೆ ತಕ್ಷಣಕ್ಕೆ ಸೂಕ್ತ ಪರಿಹಾರ ದೊರೆತಂತಾಗುತ್ತದೆ.

Advertisement

ಜಿಲ್ಲೆಯ ಅನೇಕ ಶಾಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಕಡ್ಡಾಯವಾಗಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಪ್ರತಿ ದಿನ ಸಂಜೆ 6ರ ವರೆಗೆ ಶಾಲೆಯಲ್ಲೇ ಇರಬೇಕು. 6ರ ನಂತರ ವಿದ್ಯಾರ್ಥಿನಿಯರಿಗೆ ಮಾತ್ರವೇ ಮನೆಗೆ ತೆರಳಲು ಅವಕಾಶ ಇದೆ. ದಾವಣಗೆರೆ ತಾಲೂಕಿನ ಮಳಲ್ಕೆರೆ, ಹೂವಿನಮಡು, ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆ ಇತರೆಡೆ ರಾತ್ರಿ 9ರ ವರೆಗೂ ವಿಶೇಷ ತರಗತಿ ನಡೆಸಲಾಗುತ್ತಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಕೋಶ ನೀಡಲಾಗಿದೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಸಂಭವನೀಯ ಪ್ರಶ್ನೆಗಳ ಮಾಹಿತಿ ನೀಡಲಾಗುವುದು. ಕೆಲವಾರು ವಿಷಯ ಶಿಕ್ಷಕರು ಸಾಮಾನ್ಯವಾಗಿ ಕೇಳಬಹುದಾದ ಪ್ರಶ್ನೆಗಳ ಬಗ್ಗೆಯೂ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

21,467 ವಿದ್ಯಾರ್ಥಿಗಳು :  ಮಾ. 27 ರಿಂದ ಏ.9ರ ವರೆಗೆ ಜಿಲ್ಲೆಯ 67 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಒಟ್ಟು 21,467 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೊನ್ನಾಳಿ ವಲಯದಲ್ಲಿ 2,848, ಜಗಳೂರಿನಲ್ಲಿ 2,278,ಚನ್ನಗಿರಿಯಲ್ಲಿ 3,975, ದಾವಣಗೆರೆ ಉತ್ತರ ವಲಯದಲ್ಲಿ 3,349, ದಕ್ಷಿಣ ವಲಯದಲ್ಲಿ ಅತೀ ಹೆಚ್ಚು 5,768, ಹರಿಹರದಲ್ಲಿ 3,249 ವಿದ್ಯಾರ್ಥಿಗಳು ಇದ್ದಾರೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 5ರ ಒಳಗಿನ ಸ್ಥಾನ ಪಡೆಯುವ ನಿಟ್ಟಿನಲ್ಲಿ ವಿಶನ್‌-05… ಕಾರ್ಯಕ್ರಮ ರೂಪಿಸಿದ್ದೇವೆ. ಎಲ್ಲಾ ಶಾಲೆಯಲ್ಲಿ ವಿಶನ್‌-05 ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಫೋನ್‌ ಇನ್‌, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಕೆಲ ಶಾಲೆಯಲ್ಲಿ ರಾತ್ರಿ ವೇಳೆಯಲ್ಲೂ ಶಾಲೆ ನಡೆಸಲಾಗುತ್ತಿದೆ. ಸಂವಾದ ಒಳಗೊಂಡಂತೆ ಹಲವಾರು ರಚನಾತ್ಮಕ ಕಾರ್ಯಕ್ರಮ ಕಾರ್ಯರೂಪಕ್ಕೆ ತರಲಾಗಿದೆ. ಸಿ.ಆರ್‌. ಪರಮೇಶ್ವರಪ್ಪ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

 

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next