Advertisement

ವಿಮಾನದಲ್ಲಿ ವೈರಸ್‌ ಸುಲಭವಾಗಿ ಹರಡದು

02:37 PM May 29, 2020 | mahesh |

ವಾಷಿಂಗ್ಟನ್‌: ಹೆಚ್ಚಿನ ವೈರಸ್‌ಗಳು ಹಾಗೂ ಇತರ ರೋಗಾಣುಗಳು ವಿಮಾನಗಳಲ್ಲಿ ಸುಲಭವಾಗಿ ಹರಡುವುದಿಲ್ಲವೆಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿ.ಡಿ.ಸಿ.) ಕೋವಿಡ್‌-19ಕ್ಕಾಗಿರುವ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ. ವಿಮಾನಗಳ ಒಳಗೆ ಇಬ್ಬರು ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಥವಾ ನಡುವಿನ ಸೀಟನ್ನು ಖಾಲಿ ಬಿಡುವುದಕ್ಕೆ ಕೂಡ ಅದು ಶಿಫಾರಸು ಮಾಡುವುದಿಲ್ಲ. ಕೋವಿಡ್‌ನಿಂದಾಗಿ ಅಮೆರಿಕದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ವಿಮಾನಯಾನ ಶೇ. 90 ಸ್ಥಗಿತಗೊಂಡಿರುವುದಾಗಿ ಹೇಳಲಾಗಿದೆ. ಹೊರದೇಶಗಳಿಂದ ಬರುವ ಎಲ್ಲರಿಗೆ 14 ದಿನಗಳ ಕ್ವಾರಂಟೈನ್‌ ಅನ್ನು ಸಿ.ಡಿ.ಸಿ. ಶಿಫಾರಸು ಮಾಡಿದೆ.

Advertisement

ಏನು ಕಾರಣ?
“ವಿಮಾನದೊಳಗೆ ಗಾಳಿಯಾಡುವ ಮತ್ತು ಸೋಸಲ್ಪಡುವ ವಿಧಾನದಿಂದಾಗಿ ಹೆಚ್ಚಿನ ವೈರಸ್‌ಗಳು ಹಾಗೂ ಇತರ ರೋಗಾಣುಗಳು ಹರಡುವುದಿಲ್ಲ. ಆದರೆ ವಿಶೇಷವಾಗಿ ಕೋವಿಡ್‌ ಹಬ್ಬುತ್ತಿರುವ ಈ ಕಾಲಘಟ್ಟದಲ್ಲಿ ವಿಮಾನ ಪ್ರಯಾಣಿಕರು ಅಪಾಯರಹಿತರೆಂದು ಹೇಳುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು ಸಾಧ್ಯವಾದಷ್ಟು ವಿಮಾನಪ್ರಯಾಣವನ್ನು ತಪ್ಪಿಸಿಕೊಳ್ಳುವಂತೆ ಅಮೆರಿಕನರಿಗೆ ಶಿಫಾರಸು ಮಾಡಿದೆ. “ವಿಮಾನ ಪ್ರಯಾಣಕ್ಕಾಗಿ ಸೆಕ್ಯುರಿಟಿ ಸಾಲುಗಳಲ್ಲಿ ಮತ್ತು ವಿಮಾನನಿಲ್ದಾಣ ಟರ್ಮಿನಲ್‌ಗ‌ಳಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದು ನಿಮಗೆ ಇತರ ಜನರೊಂದಿಗೆ ಮತ್ತು ಎಲ್ಲರೂ ಸ್ಪರ್ಶಿಸುವ ಮೇಲ್ಮೆ„ಯೊಂದಿಗೆ ನಿಕಟ ಸಂಪರ್ಕಕ್ಕೆ ಕಾರಣವಾಗಬಹುದು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. “ಪ್ರಯಾಣಿಕರಿಂದ ತುಂಬಿರುವ ವಿಮಾನಗಳಲ್ಲಿ ಸಾಮಾಜಿಕ ಅಂತರ ನಿಯಮವನ್ನು ಪಾಲಿಸಲು ಕಷ್ಟ ಮತ್ತು ನೀವು ಬೇರೆಯವರ ಹತ್ತಿರ(ಆರು ಅಡಿಯೊಳಗೆ) ಕುಳಿತುಕೊಳ್ಳಬೇಕಾಗಬಹುದು. ಇದು ಕೋವಿಡ್‌ಗೆ ಕಾರಣವಾಗುವ ವೈರಸ್‌ಗೆ ಒಡ್ಡಿಕೊಳ್ಳುವ ನಿಮ್ಮ ಅಪಾಯ ಹೆಚ್ಚಿಸಬಲ್ಲುದು’ ಎಂದು ಸಿ.ಡಿ.ಸಿ. ಹೇಳಿದೆ.

ಮುನ್ನೆಚ್ಚರಿಕೆ ಕ್ರಮ
ಆದರೆ ವಾಣಿಜ್ಯ ವಿಮಾನಗಳಲ್ಲಿ ಶಿಫಾರಸು ಮಾಡಲಾಗಿರುವ ಸಾಮಾಜಿಕ ಅಂತರದ ಬದಲು ವಿಮಾನಗಳ ಪೈಲಟ್‌ಗಳು ಹಾಗೂ ಸಿಬಂದಿ ಕೋವಿಡ್‌ ಹರಡುವಿಕೆಯನ್ನು ತಡೆಯಲು ಕೈಗೊಳ್ಳಬೇಕಾದ ಹಲವು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಕ್ರಮಗಳನ್ನು ಸಲಹೆ ಮಾಡಿದೆ. ಪ್ರಯಾಣಿಕನೊಬ್ಬನಲ್ಲಿ ಜ್ವರ, ನಿರಂತರ ಕೆಮ್ಮು, ಉಸಿರಾಟ‌ ತೊಂದರೆ, ಅಸ್ವಸ್ಥತೆಯ ಮುಖಭಾವ ಕಂಡುಬಂದಲ್ಲಿ ಸಿ.ಡಿ.ಸಿ.ಗೆ ಮಾಹಿತಿ ನೀಡುವಂತೆ ವಿಮಾನ ಸಿಬಂದಿಗೆ ಸೂಚಿಸಲಾಗಿದೆ.

ಕೈಗಳನ್ನು ತೊಳೆಯಿರಿ
ಕನಿಷ್ಠ 20 ಸೆಕೆಂಡ್‌ಗಳ ಕಾಲ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಅದರಲ್ಲೂ ಮುಖ್ಯವಾಗಿ ಅಸ್ವಸ್ಥ ಪ್ರಯಾಣಿಕನಿಗೆ ನೆರವಾದ ಆಥವಾ ಕಲುಷಿತಗೊಂಡಿರಬಹುದಾದ ದೇಹದ ದ್ರವಗಳು ಅಥವಾ ಮೇಲ್ಮೆ„ಗಳನ್ನು ಸ್ಪರ್ಶಿಸಿದ ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು. ಸಾಬೂನು ಮತ್ತು ನೀರು ಸಿಗದಿದ್ದರೆ ಕನಿಷ್ಠ ಶೇ. 60 ಮದ್ಯಸಾರ ಹೊಂದಿರುವ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಬೇಕೆಂದು ಮಾರ್ಗಸೂಚಿ ತಿಳಿಸಿದೆ.

ಅಸ್ವಸ್ಥ ಪ್ರಯಾಣಿಕನನ್ನು ಇತರರಿಂದ 2 ಮೀ. ದೂರದಲ್ಲಿ ಕುಳಿತುಕೊಳ್ಳಿಸಬೇಕು ಮತ್ತು ಆತನನ್ನು ಉಪಚರಿಸಲು ಸಿಬಂದಿಯನ್ನು ನಿಯೋಜಿಸಬೇಕು. ಅಸ್ವಸ್ಥ  ವ್ಯಕ್ತಿಗೆ ಮಾಸ್ಕ್ ಧರಿಸಲು ಸಾಧ್ಯವಾಗದಿದ್ದರೆ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಮುಚ್ಚುವಂತೆ ಟಿಶ್ಯೂ ಪೇಪರ್‌ ಬಳಸುವಂತೆ ಸೂಚಿಸಬೇಕು. ಹಾರಾಟ ವೇಳೆ ಅಥವಾ ಅನಂತರ ಸೋಂಕು ಲಕ್ಷಣಗಳಿದ್ದ ಪ್ರಯಾಣಿಕ ಪತ್ತೆಯಾದಲ್ಲಿ ಮಾಮೂಲಿ ಸ್ವಚ್ಛತಾ ಕ್ರಮಗಳೊಂದಿಗೆ ಹೆಚ್ಚುವರಿ ಸ್ವಚ್ಛತಾ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next