Advertisement
60 ವರ್ಷಗಳ ಹಿಂದೆಯೇ ನಿಸರ್ಗದ ಕಾರುಬಾರು ಗಳನ್ನು ಡಾ|ಕಾರಂತರು ಸೂಕ್ಷ್ಮವಾಗಿ ಅಲ್ಲದಿದ್ದರೂ ಸ್ಥೂಲವಾಗಿ ವಿಮರ್ಶಿಸಿದ್ದಾರೆನ್ನಬಹುದು, ಅದೂ ಮಗನ ಸಾವಿನ ದಾರುಣ ಅನುಭವದ ನಡುವೆ. ದೇವರೆಂಬವನೊಬ್ಬನಿದ್ದರೆ ಆತ ನಿಷ್ಪಕ್ಷಪಾ ತಿಯಾಗಿದ್ದಾನು ಎಂಬ ವಿಮರ್ಶೆ ಮಹಾನ್ ದಾರ್ಶನಿಕರು ಹೇಳಿದ್ದೇ ಆಗಿದೆ. ಶ್ರೀಕೃಷ್ಣನ ಕರ್ಮಸಿದ್ಧಾಂತವೂ ಇದನ್ನೇ ಬೋಧಿಸುವುದಲ್ಲವೆ? ಸಾವಿನ ಸ್ವಂತ ಅನುಭವದ ನಡುವೆಯೂ ದೇವರ ಬಗೆಗೆ ಖಚಿತವಾಗಿ (ಪರರಿಗೆ ಉಪದೇಶಕ್ಕಾಗಿಯಲ್ಲ, ಪ್ರಾಮಾಣಿಕವಾಗಿ, ಸ್ವಯಂ ಪ್ರಯೋಗಕ್ಕೆ ಒಡ್ಡಿ) ಮಾತನಾಡಬಲ್ಲ ಆಸ್ತಿಕರ ಮತ್ತು ನಾಸ್ತಿಕರ ಕೊರತೆ ಇರುವಾಗ ವಿದ್ವಾಂಸ ಡಾ|ಪ್ರಭಾಕರ ಜೋಶಿ ಅವರು ಸಭೆಯೊಂದರಲ್ಲಿ “ಕಾರಂತರು ನಾಸ್ತಿಕರೂ ಅಲ್ಲ, ಆಸ್ತಿಕರೂ ಅಲ್ಲ, ಅವರು ಅನಾಸ್ತಿಕರು’ ಎಂದು ಹೇಳಿದ್ದನ್ನು ಸ್ಮರಿಸಬಹುದು.
Related Articles
Advertisement
“ಪ್ರಕೃತಿಯಲ್ಲಿ ಒಂದು ಜೀವ ಇನ್ನೊಂದು ಜೀವದ ಮೇಲೆ ಬದುಕಿಕೊಂಡಿದೆ. ನಿಸರ್ಗ ವೈರಸ್‌ಗಳನ್ನು ಕಾಯಬೇಕಾಗುತ್ತದೆ. ಆ ವೈರಸ್ ಬದುಕಲು ಪರರ ಜೀವಗಳನ್ನು ಬಲಿ ಪಡೆಯಬೇಕಾಗುತ್ತದೆ. ನಿಸರ್ಗಕ್ಕೆ ಯಾವ ಜೀವಿ ಮುಖ್ಯ? ಯಾವುದು ಅಮುಖ್ಯ? ನನ್ನ ಮಗ ಒಂದೇನು ಹೆಚ್ಚು? ಒಂದು ಅಣುಜೀವಿಯೇನು ಕಡಿಮೆ? ನೀವೆನ್ನುವಂತೆ ಪ್ರತ್ಯೇಕ ದೈವವೊಂದು, ಅನಾಥರನ್ನು ಕಾಯಬಲ್ಲ ಶಕ್ತಿಯೊಂದು ಇದೆ- ಎಂದು ತಿಳಿಯುವಲ್ಲಿ, ಆ ದೈವ ನನ್ನ ಮೊರೆಯನ್ನು ಕೇಳಿ ನನ್ನ ನೆರವಿಗೆ ಧಾವಿಸಿ ಬರಬೇಕೆ? ಅಥವಾ ಉಳಿಯುವುದಕ್ಕೆ ಯಾರು ಯೋಗ್ಯರು ಎಂದು ತಾನೇ ಕಂಡು ಹಿಡಿದು, ತಾನೇ ಆಯ್ದು ಸಹಾಯ ನೀಡಬೇಕೆ? ನನಗಿಂತ ಹೆಚ್ಚಾಗಿ ದೈವಭಕ್ತಿಯಲ್ಲಿ ದಿನ ಕಳೆಯುವ ಅನೇಕ ಜೀವಗಳಿದ್ದಾವೆ ಎಂಬುದನ್ನು ಬಲ್ಲೆ. ಅಂಥವರ ನೆರವಿಗೆ ದೈವ ಮೊದಲು ಧಾವಿಸಬೇಡವೆ? ಆ ಜನಗಳ ಯೋಗ್ಯತೆಗಿಂತ ನಾನೋ ನನ್ನ ಮಗನೋ ಬದುಕಲು ಹೆಚ್ಚಿಗೆ ಹಕ್ಕುಳ್ಳವರು ಎಂಬ ಭಾವನೆ ನನ್ನಿಂದ ತಂದುಕೊಳ್ಳುವುದು ಅಸಾಧ್ಯ’.
1926-27ರಲ್ಲಿ ಮಂಗಳೂರಿನಲ್ಲಿದ್ದಾಗ ಕಾರಂತರಿಗೆ ಸನ್ನಿಪಾತದ ಜ್ವರ ಬಂದಿತ್ತು. ಆಗ ಆನಂದರಾಮ ಭಟ್ಟ ಎಂಬವರ ಮನೆಯಲ್ಲಿ ಭಟ್ಟರ ಹೆಂಡತಿ ಕಾರಂತರ ಆರೈಕೆ ಮಾಡಿದ್ದರು. ಭಟ್ಟರ ಹೆಂಡತಿ ಒಂದು ದಿನ ಒಂದಿಷ್ಟು ಗಂಧಪ್ರಸಾದವನ್ನು ಕೊಟ್ಟು “ದೇವರೇ ಬೇಗ ಗುಣ ಮಾಡು ಎಂದು ಬೇಡಿ’ ಎಂದು ಬೋಧಿಸಿದರು. ಗಂಧವನ್ನು ಕಾರಂತರು ಹಚ್ಚಿಕೊಂಡರು. ಆಗ ಕಾರಂತರ ಮನದಲ್ಲಿ ಮೂಡಿದ್ದು ಹೀಗೆ: “ನಾನು ನನ್ನನ್ನು ಬದುಕಿಸುವುದಕ್ಕಾಗಿ ದೇವರಲ್ಲಿ ಮೊರೆ ಇಡಬೇಕೆ? ಯಾತಕ್ಕೆ? ಅಸಂಖ್ಯ ಕೋಟಿ ಜೀವಿಗಳು ಪ್ರತೀ ಕ್ಷಣಕ್ಕೂ ಎಂಬಂತೆ ಹುಟ್ಟುತ್ತಲೇ ಇವೆ. ಸಾಯುತ್ತಲೇ ಇವೆ ಎಂಬುದು ನನಗೆ ಗೊತ್ತಿದೆ. ಅಂಥಲ್ಲಿ ಬರಿಯ ನನ್ನ ಒಂದು ಜೀವವನ್ನು ಉಳಿಸಲು ದೇವರಿಗೆ ಅರ್ಜಿ ಹಾಕಬೇಕಾದ ಪಾವಿತ್ರ್ಯ ಅದಕ್ಕೆ ಎಲ್ಲಿಂದ ಬಂತು? “ದೇವರಿದ್ದಾನೆ’ ಎಂದು ಎಣಿಸಿದ ಆ ಕಾಲದಲ್ಲಿಯೂ ಆ ರೀತಿ ಪ್ರಾರ್ಥನೆ ಮಾಡಲಾರದ, ಮೃತ್ಯುಮುಖೀಗಳಾದ ಇತರ ಜೀವಿಗಳನ್ನು ಮರೆತು, ಆ ದೇವರು ನನ್ನ ಮೊರೆಯನ್ನು ಕೇಳಿ ಮನ್ನಿಸಲಿ ಎಂದು ತಿಳಿಯುವುದು ಅದೆಷ್ಟು ಮೂರ್ಖತನ ಎನಿಸಿತು’.
“ಹುಚ್ಚು ಮನಸ್ಸಿನ ಹತ್ತು ಮುಖಗಳು’ ಆತ್ಮಕಥನದಲ್ಲಿ ತನ್ನ ಜೀವನದ ಅನೇಕ ಸಾವಿನ ಸನ್ನಿವೇಶಗಳು, ಅದು ಸಂಸಾರದ ಮೇಲೆ ಬೀರಿದ ಪರಿಣಾಮವನ್ನು ಕಂಡ ಡಾ|ಕಾರಂತರು ಹಿಂದಿನಿಂದಲೂ ಒಂದು ವಿವೇಕ ಮಾತ್ರ ಇಂದಿಗೂ ಉಳಿದುಬಂದಿದೆ. ಅದೆಂದರೆ “ದೇವರು ನಮಗಾಗಿ ಇಲ್ಲ, ಅವನಿರುವನಾದರೆ ಆತ ಯಾವತ್ತು ಜಗತ್ತಿನ ಜೀವಿಗಳಿಗೆ ನಿಷ್ಪಕ್ಷಪಾತಿಯಾಗಿದ್ದಾನು’ ಎಂಬ ವಿಚಾರ ಸರಣಿ ಎಂದು ಉಲ್ಲೇಖೀಸಿದ್ದಾರೆ. 1920ರ ದಶಕದಿಂದ 1990ರ ದಶಕದವರೆಗೂ ಅವರಲ್ಲಿದ್ದ ವಿಚಾರ ಸಾರ ಇದು.
ಶಿವರಾಮ ಕಾರಂತರ ಮಗ ಹರ್ಷನಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಎ.ವಿ.ಬಾಳಿಗಾ ಅವರೂ ದೊಡ್ಡ ಉದಾತ್ತಶೀಲರು. ಉಡುಪಿ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಯನ್ನು ಎ.ವಿ.ಬಾಳಿಗಾರಿಂದ ಪ್ರವರ್ತಿತವಾದ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿದೆ, ಬಾಳಿಗರು ಮಣಿಪಾಲದ ಪೈ ಬಂಧುಗಳ ಬಂಧುಗಳು, ಮಣಿಪಾಲ ಆಸ್ಪತ್ರೆಯಲ್ಲಿ ಒಂದು ಬ್ಲಾಕ್ ಇವರ ಹೆಸರಿನಲ್ಲಿದೆ. ಹೈದರಾಬಾದ್ ನಿಜಾಮನಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಿ ಅದರ ಶುಲ್ಕವನ್ನು (25,000 ರೂ.) ಕುಮಟಾದ ಎ.ವಿ.ಬಾಳಿಗಾ ಕಾಲೇಜಿಗೆ ದಾನವಾಗಿ ಕೊಡಿಸಿದವರು.
–ಮಟಪಾಡಿ ಕುಮಾರಸ್ವಾಮಿ