ತಿರುಮಲ: ಜಗತ್ತಿನಾದ್ಯಂತ ಉದ್ಯಮಗಳ, ಜನರ ನಿದ್ದೆಗೆಡಿಸಿರುವ ರ್ಯಾನ್ಸಮ್‌ವೇರ್ ವೈರಸ್ ದಾಳಿ ಕಾಟ ತಿರುಪತಿಯ ತಿಮ್ಮಪ್ಪನನ್ನೂ ಬಿಟ್ಟಿಲ್ಲ.
ತಿರುಪತಿ ದೇಗುಲದ ಆಡಳಿತ ಮಂಡಳಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ 10 ಕಂಪ್ಯೂಟರ್‌ಗಳ ಮೇಲೆ ಹ್ಯಾಕರ್‌ಗಳು ರ್ಯಾನ್ಸಮ್‌ವೇರ್ ದಾಳಿ ನಡೆಸಿದ್ದಾರೆ. ಪರಿಣಾಮ ಸಿಬಂದಿವರ್ಗ ದಾಳಿಯ ಭೀತಿಯಿಂದಾಗಿ ಹೆಚ್ಚುವರಿಯಾಗಿ 20 ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.
ಇದೆಲ್ಲ ಆಡಳಿತ ಕೆಲಸಕ್ಕಾಗಿ ಬಳಸುತ್ತಿರುವ ಕಂಪ್ಯೂಟರ್‌ಗಳಾಗಿವೆ. ಟಿಕೆಟ್ ನೀಡುವುದು, ಭಕ್ತಾದಿಗಳ ಸೇವೆ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಿಸುವ ಕಂಪ್ಯೂಟರ್‌ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ವೈರಸ್ ದಾಳಿ ಹಿನ್ನೆಲೆಯಲ್ಲಿ ಟಿಟಿಡಿ ಐಟಿ ವಿಭಾಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನೊಂದಿಗೆ ಸಂಪರ್ಕದಲ್ಲಿದೆ. ದಾಳಿಗೊಳಗಾದ ಕಂಪ್ಯೂಟರ್‌ಗಳು ಹಳೆ ಆಪರೇಟಿಂಗ್ ಸಿಸ್ಟಂ ಹೊಂದಿದ್ದವು ಎಂದು ಟಿಟಿಡಿ ಹೇಳಿದೆ.
ಆಸ್ಪತ್ರೆ ಮೇಲೂ ದಾಳಿ: ಇನ್ನೊಂದೆಡೆ, ಒಡಿಶಾದ ಗಂಜಾಂ ಜಿಲ್ಲೆಯಲ್ಲಿರುವ ಬರ್ಹಾಂಪುರ ಸರಕಾರಿ ಆಸ್ಪತ್ರೆಯ ಡಾಟಾ ವ್ಯವಸ್ಥೆಯ ಮೇಲೂ ವನ್ನಾಕ್ರೈ ರ್ಯಾನ್ಸಮ್‌ವೇರ್ ವೈರಸ್ ಅಟ್ಯಾಕ್ ಆಗಿದೆ. ಇಲ್ಲಿನ ಸಿಸ್ಟಂಗಳು ಏಕಾಏಕಿ ಕೆಟ್ಟುಹೋಗಿದ್ದು, 300 ಡಾಲರ್‌ಗಳನ್ನು ನೀಡಿದರೆ ಮಾತ್ರ ಸಿಸ್ಟಂಗಳನ್ನು ಸರಿಪಡಿಸುತ್ತೇವೆ ಎಂಬ ಸಂದೇಶಗಳು ಬರತೊಡಗಿವೆ. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ದ ತಜ್ಞರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿ ಸರೋಜ್ ಮಿಶ್ರಾ ತಿಳಿಸಿದ್ದಾರೆ.