Advertisement
ಹಂಪಿ ಸುತ್ತಲಿರುವ ಪುರಾತನ ಸ್ಮಾರಕ ಸಂರಕ್ಷಣೆಗೆ ಸುಪ್ರೀಂಕೋರ್ಟ್ ಫೆ.11ರಂದು ನೀಡಿದ್ದ ಆದೇಶದಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವಿರೂಪಾಪೂರಗಡ್ಡಿಯಲ್ಲಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರವು ಮಾಡಲು ಬಳ್ಳಾರಿ-ಕೊಪ್ಪಳ ಜಿಲ್ಲಾಡಳಿತಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಮನವಿ ಮಾಡಿದೆ.
Related Articles
Advertisement
ಧರೆಗುರುಳಿದ ರೆಸಾರ್ಟ್‌ಗಳ ವೈಭವ : ಹಂಪಿ-ಕಿಷ್ಕಿಂದಾ ಆನೆಗೊಂದಿ ಅಂಜನಾದ್ರಿ ಬೆಟ್ಟ ವೀಕ್ಷಣೆಗೆ ಆಗಮಿಸುತ್ತಿದ್ದ ದೇಶ ವಿದೇಶದ ಪ್ರವಾಸಿಗರು ವಿರೂಪಾಪೂರಗಡ್ಡಿಯಲ್ಲಿದ್ದ ರೆಸಾರ್ಟ್‌ಗಳಲ್ಲಿ ಉಳಿದುಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಮೊದಲಿಗೆ ಬೆರಳೆಣಿಕೆಯಷ್ಟಿದ್ದ ರೆಸಾರ್ಟ್‌ಗಳು ವರ್ಷದಿಂದ ವರ್ಷಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚಾಗಿ ಗಡ್ಡಿಯ ರೆಸಾರ್ಟ್‌ಗಳ ವ್ಯವಹಾರ ವಾರ್ಷಿಕ ಕೋಟ್ಯಂತರ ದಾಟಿತು. ಮದ್ಯ, ಮಾಂಸ, ತರಕಾರಿ, ಹಾಲು, ತಂಪು ಪಾನೀಯ, ಬೈಕ್‌ಗಳ ಬಾಡಿಗೆ ವ್ಯವಹಾರ ಜತೆ ಕೆಲ ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆದವು. ಯುನೆಸ್ಕೋ ಪ್ರತಿನಿಧಿಗಳು ವೇಷ ಬದಲಿಸಿ ವಿರೂಪಾಪೂರಗಡ್ಡಿ ರೆಸಾರ್ಟ್ ಒಂದಕ್ಕೆ ತೆರಳಿದ ವೇಳೆ “ಮದ್ಯ ಸೇರಿ ಕೆಲವು ಮತ್ತು ಬರಿಸುವ ವಸ್ತುಗಳು ಬೇಕಾ’ ಎಂದು ಕೇಳಿದ ವಿಷಯವನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಯುನೆಸ್ಕೋ ಪ್ರತಿನಿಧಿಗಳು ಬಹಿರಂಗಗೊಳಿಸಿದ್ದರು. ಅಂದಿನಿಂದ ಹಂಪಿ ಅಭಿವೃದ್ಧಿ ಪ್ರಾಧಿ ಕಾರ ಇಲ್ಲಿಯ ರೆಸಾರ್ಟ್ ಗಳನ್ನು ತೆರವು ಮಾಡಲು ಯತ್ನಿಸಿತ್ತು. ರಾಜಕೀಯ ಒತ್ತಡಗಳ ಮಧ್ಯೆ ಅನೇಕ ಬಾರಿ ತೆರವುಗೊಳಿಸದೆ ಪ್ರಾಧಿ ಕಾರ ಅಧಿಕಾರಿಗಳು ವಾಪಸ್ ಹೋಗಿದ್ದರು. ಇದೀಗ ಸುಪ್ರೀಂ ಮತ್ತು ಹೈಕೋರ್ಟ್‌ಗಳು ರೆಸಾರ್ಟ್‌ಗಳ ತೆರವಿಗೆ ಆದೇಶ ಮಾಡಿರುವುದು ಪ್ರಾಧಿಕಾರ ಅಧಿಕಾರಿಗಳಿಗೆ ಆನೆಬಲ ಬಂದಂತಾಗಿದೆ.
ಕಳೆಗುಂದಿದ ಪ್ರವಾಸೋದ್ಯಮ : ಹಂಪಿ-ಕಿಷ್ಕಿಂದಾ ಆನೆಗೊಂದಿ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಉಳಿದುಕೊಳ್ಳಲು ಆಯ್ಕೆ ಮಾಡುತ್ತಿದ್ದ ಜಾಗ ವಿರೂಪಾಪೂರಗಡ್ಡಿಯಾಗಿತ್ತು. ಇಲ್ಲಿಯ ಪ್ರಕೃತಿ ಸೌಂದರ್ಯದ ಮಧ್ಯೆ ಸದಾ ಹಸಿರು ಗದ್ದೆಗಳ ಮಧ್ಯೆಭಾಗದಲ್ಲಿ ನಿರ್ಮಿಸಿದ್ದ ಗುಡಿಸಲು, ಗಿಡಮರಗಳಿಂದ ಬಹುತೇಕ ಪ್ರವಾಸಿಗರನ್ನು ರೆಸಾರ್ಟ್‌ಗಳು ಆಕರ್ಷಿಸಿದ್ದವು. ಸುತ್ತಲೂ ಬೆಟ್ಟ, ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ಪ್ರವಾಸಿಗರು ಆಕರ್ಷಿತರಾಗುತ್ತಿದ್ದರು. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹೆದರಿಕೆಯ ಮಧ್ಯೆ ನೂರಾರು ರೆಸಾರ್ಟ್‌ಗಳು ತಲೆ ಎತ್ತಿದ್ದವು. ವಿರೂಪಾಪೂರಗಡ್ಡಿ ಸೇರಿ ಸುತ್ತಲಿನ ಸಾಣಾಪೂರ, ಹನುಮನಹಳ್ಳಿ, ಆನೆಗೊಂದಿ, ಜಂಗ್ಲಿ, ಹಂಪಿ ಭಾಗದ ನೂರಾರು ಜನರಿಗೆ ನೇರವಾಗಿ-ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಿತ್ತು. ಸುಪ್ರೀಂಕೋರ್ಟ್ ರೆಸಾರ್ಟ್‌ಗಳ ತೆರವು ಆದೇಶದಿಂದ ಇಡೀ ಆನೆಗೊಂದಿ-ವಿರೂಪಾಪೂರಗಡ್ಡಿ ಪ್ರದೇಶ ಕಳೆಗುಂದಿದೆ ವ್ಯಾಪಾರ-ವಹಿವಾಟು ಸ್ತಬ್ಧವಾಗಿದೆ.ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಆಗಾಧ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ;ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ರೆಸಾರ್ಟ್‌ಗಳ ಸಂಖ್ಯೆ ಹೆಚ್ಚಾದಂತೆ ಇಲ್ಲಿ ಗಾಂಜಾ, ಆಫೀಮು, ಸಮುದ್ರ ಬಾಳೆ ಎಲಿ ಬೀಜ ಮಾರಾಟದಂತಹ ಅಕ್ರಮ ಚಟುವಟಿಕೆಗಳು ಕೆಲ ರೆಸಾರ್ಟ್ ಮತ್ತು ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿದ್ದರಿಂದ ಇಲ್ಲಿಗೆ ಅಧಿಕ ಪ್ರಮಾಣದಲ್ಲಿ ವೀಕ್ ಎಂಡ್ ನೆಪದಲ್ಲಿ ಅನೈತಿಕ ಕೃತ್ಯದಲ್ಲಿ ತೊಡಗಲು ಟೆಕ್ಕಿಗಳು ಆಗಮಿಸುತ್ತಿದ್ದರು ಎನ್ನಲಾಗುತ್ತಿದೆ. ರೆಸಾರ್ಟ್‌ಗಳು ತೆರವುಗೊಳ್ಳಲು ಇದು ಪ್ರಮುಖ ಕಾರಣವಾಗಿದೆ. ತುಂಗಭದ್ರಾ ನದಿಗೆ ಅಧಿಕ ಪ್ರಮಾಣದ ನೆರೆ ಪ್ರವಾಹ ಬಂದರೂ ಗಡ್ಡಿಯಲ್ಲಿ 600ಕ್ಕೂ ಅಧಿಕ ಪ್ರವಾಸಿಗರಿದ್ದರು. ಇವರನ್ನು ತುಂಬಿದ ನದಿ ದಾಟಿಸುವ ಸಂದರ್ಭದಲ್ಲಿ ರಕ್ಷಣಾ ಪಡೆಯವರು ಕೊಚ್ಚಿಕೊಂಡು ಹೋಗಿದ್ದರು. ನಂತರ ಅವರನ್ನು ರಕ್ಷಣೆ ಮಾಡಿದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದಲೇ ಅಕ್ರಮ ರೆಸಾರ್ಟ್‌ಗಳ ತೆರವಿಗೆ ಪ್ರಮುಖ ಕಾರಣವಾಗಿದೆ.
-ಕೆ.ನಿಂಗಜ್ಜ