Advertisement

ಕಾಡುಪ್ರಾಣಿಗಳ ಉಪಟಳ ಹೆಚ್ಚಳ: ವಿರೂಪಾಪೂರಗಡ್ಡಿ ತೆರವಿನಿಂದ ಚಿರತೆಗಳಿಗೆ ಆಹಾರ ಕೊರತೆ

02:06 PM Jan 10, 2021 | Team Udayavani |

ಗಂಗಾವತಿ: ತಾಲೂಕಿನ ಕಿಷ್ಕಿಂದಾ, ಅಂಜನಾದ್ರಿ ಬೆಟ್ಟದ ಸುತ್ತಲಿನ ಗುಡ್ಡಗಾಡು ಮತ್ತು ಏಳುಗುಡ್ಡ ಪ್ರದೇಶದಲ್ಲಿ ಒಂದು ವರ್ಷದಿಂದ ಕಾಡು ಪ್ರಾಣಿಗಳ ಸಾಂದ್ರತೆ ಹೆಚ್ಚಾಗಿದ್ದು, ಈ ಕುರಿತು ಸ್ಥಳೀಯರಿಗೆ ಜಾಗೃತಿ ಮೂಡಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

Advertisement

ಕಾಡುಪ್ರಾಣಿಗಳು ದಾಳಿ ನಡೆಸುವಂತಹ ಘಟನೆಗಳು ನಡೆಯುತ್ತಿರುವುದರಿಂದ ಸ್ಥಳೀಯರು ನಿತ್ಯದ ಕೆಲಸ, ಕಾರ್ಯಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 50-60 ವರ್ಷಗಳಿಂದ ಇರದ ಭಯ-ಆತಂಕ ಈಗ ನಿರಂತರವಾಗಿದ್ದು, ನಿತ್ಯವೂ ಒಂದಿಲ್ಲೊಂದು ಸ್ಥಳದಲ್ಲಿ ಚಿರತೆ, ಕರಡಿಗಳು ಪ್ರತ್ಯಕ್ಷವಾಗುತ್ತಿವೆ. ಅರಣ್ಯ ಇಲಾಖೆಯ ಪ್ರಕಾರ ಕಿಷ್ಕಿಂದಾ ಹಾಗೂ ಏಳುಬೆಟ್ಟ ಪ್ರದೇಶದಲ್ಲಿ ಚಿರೆತೆಗಳ ಸಂಖ್ಯೆ ಹೆಚ್ಚಾಗಿದ್ದು, ಇತರೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿರುವ ಸಾಧ್ಯತೆ ಇದೆ. ಕೋತಿ ಮತ್ತು ಕಾಡು ಹಂದಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಚಿರತೆಗಳು ನಿತ್ಯವೂ ಆಹಾರ ಹಾಗೂ ಇತರೆ ಕಾರಣಕ್ಕಾಗಿ ಜಾಗ ಬದಲಿಸುತ್ತಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಜನಜಾನುವಾರುಗಳಿಗೆ ಹಾನಿ ಮಾಡುತ್ತಿವೆ ಎನ್ನಲಾಗುತ್ತಿದೆ.

ಆಹಾರದ ಕೊರತೆ: ಆನೆಗೊಂದಿ ಸುತ್ತಲಿನ ಗುಡ್ಡ ಪ್ರದೇಶದಲ್ಲಿದ್ದ ಕೋತಿಗಳು ಮತ್ತು ಕಾಡು ಹಂದಿ ಇತರೆ ಸಣ್ಣ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿರುವುದು ಚಿರತೆಗಳಿಗೆ ಆಹಾರದ ಕೊರತೆಯುಂಟಾಗಿದೆ. ಪ್ರಮುಖವಾಗಿ
ವಿರೂಪಾಪೂರಗಡ್ಡಿಯಲ್ಲಿದ್ದ ರೆಸಾರ್ಟ್‌ ಮತ್ತು ಮನೆಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿ ಕಾರ ತೆರವು ಮಾಡಿದ ನಂತರ ಋಷಿಮುಖ ಪರ್ವತ, ಅಂಜನಾದ್ರಿ ಪರ್ವತ, ಬೆಂಚಿಕುಟ್ರಿ ಬೆಟ್ಟದಲ್ಲಿದಲ್ಲಿದ್ದ ಕೋತಿಗಳು ಆಹಾರದ ಕೊರತೆಯಿಂದ ಸ್ಥಳ ಬದಲಾವಣೆ ಮಾಡಿವೆ.  ಚಿರತೆಗಳಿಗೆ ಪ್ರಮುಖವಾಗಿ ಕೋತಿ, ಕಾಡುಬೆಕ್ಕು, ಕಾಡುಹಂದಿ ಆಹಾರವಾಗಿವೆ. ಆಹಾರದ ಚೈನ್‌
ಲಿಂಕ್‌ ತುಂಡಾದ ನಂತರ ಚಿರತೆಗಳು ಗುಡ್ಡಕ್ಕೆ ಮೇಯಲು ಬರುವ ಹಸು, ಕುರಿ, ಆಡು(ಮೇಕೆ) ಹಾಗೂ ಗ್ರಾಮದಲ್ಲಿ ನಾಯಿಗಳ ಮೇಲೆ ದಾಳಿ ಮಾಡಿ ಹೊತ್ತೂಯುತ್ತಿವೆ. ಪ್ರಮುಖವಾಗಿ ಕಿಷ್ಕಿಂದಾ ಬೆಟ್ಟ ಋಷಿಮುಖ ಪರ್ವತ ಪ್ರದೇಶದಲ್ಲಿರುವ ಚಿರತೆಗಳು
ಏಳುಗುಡ್ಡ ಪ್ರದೇಶ ಲಿಂಗದಳ್ಳಿ, ಯಡಿಹಳ್ಳಿ ಭಾಗದ ಬೆಟ್ಟಗಳಿಗೆ ವಲಸೆ ಹೋಗಲು ಎಡದಂಡೆ ಕಾಲುವೆ ಅಡ್ಡಿಯಾಗಿದ್ದು, ಸ್ಥಳೀಯವಾಗಿ ಆಹಾರ ಸಂಪಾದಿಸಲು ಜನಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ.

ಚಳಿಗಾಲದಲ್ಲಿ ಮರಿಗಳಿಗೆ ಜನ್ಮ ಸಾಧ್ಯತೆ: ಚಿರತೆಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಮರಿಗಳಿಗೆ ಜನ್ಮ ನೀಡುತ್ತವೆ. ಈ ಸಂದರ್ಭದಲ್ಲಿ ಗಂಡು ಚಿರತೆ ಸೇರಿ ಯಾವ ಪ್ರಾಣಿಗಳನ್ನು ಹೆಣ್ಣು ಚಿರತೆಗಳು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಚಿರತೆಗಳ ದಾಳಿ ಬಹುತೇಕ ಚಳಿಗಾಲದಲ್ಲಿ ನಡೆದಿದ್ದು, ವನ್ಯಜೀವಿ ತಜ್ಞರ ಪ್ರಕಾರ ಆಹಾರ ಅಥವಾ ಇತರ ಪ್ರಾಣಿಗಳಲ್ಲಿ ಭಯಹುಟ್ಟಿಸಲು
ಚಿರತೆಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚು.

Advertisement

ಹೆಸರಿಗೆ ಮಾತ್ರ ಕಾರ್ಯಾಚರಣೆ: ಆನೆಗೊಂದಿ ಭಾಗದ ಸಾಣಾಪೂರ, ವಿರೂಪಾಪೂರಗಡ್ಡಿ, ಜಂಗ್ಲಿ ರಂಗಾಪೂರ, ಚಿಕ್ಕರಾಂಪೂರ ಹಾಗೂ ಹನುಮನಹಳ್ಳಿ ಭಾಗದಲ್ಲಿ ವ್ಯಾಪಕವಾಗಿ ಚಿರತೆಗಳು ಪ್ರತ್ಯಕ್ಷವಾಗಿವೆ. ತಜ್ಞರ ಪ್ರಕಾರ ಚಿರತೆಗಳು ತಾವಿರುವ ಸ್ಥಳದ ಸುತ್ತ ಮಲಮೂತ್ರವನ್ನು ಮಾಡುವ ಮೂಲಕ ಗಡಿಗಳನ್ನು ಗುರುತಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಮಳೆ ನೀರಿನಿಂದ ಗಡಿ ಸ್ಥಳವನ್ನು ಪುನಃ ಗುರುತಿಸಲು ಚಿರತೆಗಳು ಬೆಳಗ್ಗೆ ಮತ್ತು ಸಂಜೆ ಸಂಚಾರ ಮಾಡುತ್ತವೆ. ಈ ಸಂದರ್ಭದಲ್ಲಿ
ಜನರಿಗೆ ಚಿರತೆಗಳು ಪ್ರತ್ಯಕ್ಷವಾಗುವ ಸಾಧ್ಯತೆ ಹೆಚ್ಚು. ಈ ಕುರಿತು ಅರಣ್ಯ ಇಲಾಖೆಯವರಿಗೆ ಸಮಗ್ರ ಮಾಹಿತಿ ಇದ್ದರೂ ಸ್ಥಳೀಯರಿಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ವಿರೂಪಾಪೂರಗಡ್ಡಿ ತೆರವು ನಂತರ ಕೋತಿಗಳು ಮತ್ತು ಚಿರತೆಗಳಿಗೆ ಆಹಾರದ ಕೊರತೆಯುಂಟಾಗಿದ್ದು ಇದರಿಂದ ಚಿರತೆಗಳು ನಿರಂತರ ಸ್ಥಳ ಬದಲಾವಣೆ ಮಾಡುತ್ತಿವೆ. ಈ ಸಂದರ್ಭದಲ್ಲಿ ಜನರಿಗೆ ಕಾಣುತ್ತಿದೆ. ಆನೆಗಳ ಕಾರ್ಯಾಚರಣೆನ ವಿಫಲವಾದ ನಂತರ ಎಲ್ಲಾ ಗುಡ್ಡಗಳಲ್ಲಿ ಅರಣ್ಯ ಇಲಾಖೆಯವರು ಸಂಚಾರ ಮಾಡಿ ಚಿರತೆಗಳಿರುವ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶೀಘ್ರ  ರತೆಗಳನ್ನು
ಸೆರೆ ಹಿಡಿಯಲಾಗುವುದು ಜನರು ಜಾಗೃತಿಯಿಂದ ಇರಬೇಕು. ಕುರಿ, ಮೇಕೆ, ದನ ಮೇಯಿಸಲು ಗುಡ್ಡಗಳ ಬಳಿಗೆ ಹೋಗಬಾರದು.
– ಶಿವರಾಜ್‌ ಮೇಟಿ, ಆರ್‌ಎಫ್‌ಒ

Advertisement

Udayavani is now on Telegram. Click here to join our channel and stay updated with the latest news.

Next