ಸಿಂಧನೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಸ್ಕಿಯಲ್ಲಿ ನಡೆಯಲಿರುವ ಬಹಿರಂಗ ಸಮಾವೇಶಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನೂ ಕೂಡ ಅದ್ಧೂರಿಯಾಗಿ ನೆರವೇರಿಸುವ ಉದ್ದೇಶದೊಂದಿಗೆ ತಾಲೂಕಿನ ಹಳ್ಳಿ-ಹಳ್ಳಿಯಿಂದಲೂ ಬೆಂಬಲಿಗರನ್ನು ಕರೆದೊಯ್ಯುವ ಸಿದ್ಧತೆ ನಡೆದಿದೆ.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಈಗಾಗಲೇ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಿಎಂ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಂತರದಲ್ಲಿ ಅವರ ಬೆಂಬಲಿಗರನ್ನು ಬಹಿರಂಗವಾಗಿ ಬಿಜೆಪಿಗೆ ಸ್ವಾಗತಿಸಿಕೊಳ್ಳುವುದರ ಜತೆಗೆ ಮಸ್ಕಿ ಉಪಚುನಾವಣೆ ಅಭ್ಯರ್ಥಿಯ ಪರ ಬಹಿರಂಗ ಚುನಾವಣೆ ಪ್ರಚಾರದ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಎರಡು ಉದ್ದೇಶಗಳ ಹಿನ್ನೆಲೆಯಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮದತ್ತ ತಾಲೂಕಿನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಲು ಮುಂದಾಗಿದ್ದಾರೆ.
ಹಲವರು ಕಮಲದ ತೆಕ್ಕೆಗೆ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಬೆಂಬಲಿಗರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶರಣಪ್ಪ, ಅಮರೇಶ ಅಂಗಡಿ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಪೂಜಪ್ಪ ಪೂಜಾರಿ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಬಸವಂತಪ್ಪ ಮಾನ್ವಿ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಹಂಪಯ್ಯಸ್ವಾಮಿ, ಶರಣಪ್ಪ ಭೋವಿ ಸೇರಿದಂತೆ ಇತರೆ ಮುಖಂಡರು ಇದೇ ವೇಳೆ ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ಈ ನಡುವೆ ಜೆಡಿಎಸ್ ಮುಖಂಡ ತಿಮ್ಮಾರೆಡ್ಡಿ ಹುಡಾ, ಜೆಡಿಎಸ್ ವಿಕಲಚೇತನರ ಘಟಕದ ರಾಜ್ಯಾಧ್ಯಕ್ಷ ಆಗಿರುವ ದೇವೇಂದ್ರಗೌಡ ಅವರು ಕೆವಿಯವರನ್ನು ಹಿಂಬಾಲಿಸಿ, ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ರಾಜಕೀಯ ಸಂಚಲನ: ಮಸ್ಕಿಯಲ್ಲಿ ಆಯೋಜನೆಯಾಗಿರುವ ಬೃಹತ್ ಕಾರ್ಯಕ್ರಮ ಸ್ಥಳೀಯ ವಿಧಾನಸಭೆ ಕ್ಷೇತ್ರದ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಬಸಾಪರು ಕೆ.ಸೇರಿದಂತೆ ಕೆಲವು ಕಡೆ ಕಾಂಗ್ರೆಸ್ ಹಿಡಿತವಿದೆ. ಅಲ್ಲಿನ ಚುನಾಯಿತ ಸದಸ್ಯರೇ ಈಗ ಮಾಜಿ ಸಂಸದರ ಜತೆಯಲ್ಲಿ ಬಿಜೆಪಿಯತ್ತ ಸೇರಲು ಮುಂದಾಗಿದ್ದಾರೆ. ಜೆಡಿಎಸ್‌ನ ಕೆಲವು ಮುಖಂಡರನ್ನು ಕೂಡ ಬಿಜೆಪಿಯತ್ತ ಸೆಳೆಯಲಾಗಿದೆ. ತಮ್ಮ ಬೆಂಬಲಿಗರು ಹಾಗೂ ಇತರೆ ಪಕ್ಷದಲ್ಲಿನ ಮುಖಂಡರನ್ನು ಕೂಡ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಬಿಜೆಪಿಗೆ ಸೇರಿಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.