ಶಿಕಾರಿಪುರ: ನಾಡಿನ ವಿವಿಧ ಭಾಗಗಳಿಂದ ನೊಂದು-ಬೆಂದು ಬಂದಂತಹ ಅನೇಕ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಿ ಸರ್ವತೋಮುಖ ಅಭಿವೃದ್ಧಿಗೆ ಆಶೀರ್ವದಿಸಿದ ಮಹಾಪುರುಷರು ಲಿಂಗೈಕ್ಯ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಎಂದು ತಿಪ್ಪಾಯಿಕೊಪ್ಪ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಕಾಯಕಯೋಗಿ, ಮಹಾಪ್ರಸಾದಿ ಲಿಂಗೈಕ್ಯ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳವರ ಪ್ರಥಮ ಪುಣ್ಯರಾಧನೆ ಹಾಗೂ ನೂತನ ಗುರುಗಳಾದ ಮಹಾ ತಪಸ್ವಿ ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರ ಸಮಾರಂಭದಲ್ಲಿ ನೂತನ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಕಾಯಕಯೋಗಿ ಹಾಗೂ ಮಹಾ ತಪಸ್ವಿ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಕಾಳೆನಳ್ಳಿಯ ಶಿವಯೋಗಾಶ್ರಮದಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸುವ ಮೂಲಕ, ನೂರಾರು ಭಕ್ತರಿಗೆ ಪ್ರತಿನಿತ್ಯ ದಾಸೋಹ ಹಾಗೂ ಅವರ ಕಷ್ಟ-ನಷ್ಟ, ಸುಖ-ಸಂತೋಷ ಹಾಗೂ ನೊಂದು-ಬೆಂದ ಅನೇಕ ಭಕ್ತರಿಗೆ ಸಾಂತ್ವನ ಹೇಳಿದರು.
ಅಲ್ಲದೇ, ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿವಯೋಗಾಶ್ರಮದಲ್ಲಿದ್ದ ನೂರು ಎಕರೆ ಜಮೀನಿಗೆ ಇನ್ನೂ ಹತ್ತಾರು ಎಕರೆ ಜಮೀನು ಸೇರಿಸುವ ಮೂಲಕ ಆಶ್ರಮದ ಅಭಿವೃದ್ಧಿ ಮಾಡಿದರು ಎಂದು ಸ್ಮರಿಸಿದರು. ಶ್ರೀಗಳು ಲಿಂಗೈಕ್ಯರಾಗುವ ಮೊದಲು ಅನಾರೋಗ್ಯ ಪೀಡಿತರಾಗಿದ್ದಾಗ ಮುಂದಾಲೋಚನೆ ಇಟ್ಟುಕೊಂಡು ಆಶ್ರಮದ ಉತ್ತರಾಧಿಕಾರಿಯಾಗಿ ಡಾ. ಸಿದ್ದಲಿಂಗ ಮಹಾಸ್ವಾಮಿಗಳಿಗೆ ಮಠದ ಸಮಸ್ತ ಆಸ್ತಿಯನ್ನು ವಿಲ್ ಬರೆದಿರುವುದು ತುಂಬಾ ಅನುಕೂಲಕರವಾಗಿದೆ. ನೂತನ ಶ್ರೀಗಳು ಮಠದ ಸಮಸ್ತ ಆಸ್ತಿಯನ್ನು ಕಾಪಾಡಿಕೊಂಡು, ಇಲ್ಲಿಗೆ ಆಗಮಿಸುವ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿ ಮೂರುಸಾವಿರ ಮಠಾಧೀಶ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ರೇವಣಸಿದ್ಧ ಮಹಾಸ್ವಾಮಿಯವರೊಂದಿಗೆ ತಮ್ಮದು ಅವಿನಾಭಾವ ಸಂಬಂಧವಿತ್ತು.1975 ರಿಂದಲೂ ಅವರೊಡನೆ ಒಡನಾಟ ಹೊಂದಿದ್ದೆ. ಅವರು ನನಗೆ ತಾಯಿಗಿಂತಲೂ ಹೆಚ್ಚಿನ ಪ್ರೀತಿ ನೀಡಿ, ಪಟ್ಟಾಭಿಷೇಕ ಸಂದರ್ಭದಲ್ಲಿ ಆಶೀರ್ವಾದ ಮಾಡಿದ್ದರು. 10ನೇ ತರಗತಿಯಲ್ಲಿ ಓದುತ್ತಿದ್ದ ನನಗೆ ರುದ್ರಮುನಿ ಸ್ವಾಮೀಜಿಯವರು ಇಲ್ಲಿಗೆ ಕಳಿಸಿದ್ದರು. ಅಂದಿನಿಂದ ಅವರು ಲಿಂಗೈಕ್ಯರಾಗುವವರೆಗೂ ನಿರಂತರವಾಗಿ ಅವರ ಸಲಹೆ-ಸಹಕಾರದಿಂದ ಮೂರುಸಾವಿರ ಮಠದ ಪೀಠಾಧಿಪತ್ಯವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.
ಶಿವಯೋಗಾಶ್ರಮದ ಪೀಠಕ್ಕೆ ಸುಮಾರು ನಾನೂರು ಎಕರೆ ಜಮೀನು ಇತ್ತು. ಅದರಲ್ಲಿ ಮುನ್ನೂರು ಎಕರೆ ಜಮೀನು ಕಂದಾಯ ಕಟ್ಟಲಾಗದೆ, ತಾಲೂಕಿನ ಕಪ್ಪನಹಳ್ಳಿ ಕಾಳೇನಹಳ್ಳಿ ಹಾಗೂ ಕೊಟ್ಟ ಗ್ರಾಮದ ಮಠದ ಭಕ್ತರಿಗೆ ದಾನ ಹಾಗೂ ಟೆನೆನ್ಸಿ ಕಾಯ್ದೆ ಮೂಲಕ ನೀಡಲಾಯಿತು ಎಂದರು.