Advertisement

ವಿರೂಪಾಕ್ಷೇಶ್ವರ-ಪಂಪಾದೇವಿ ಹೇಮಕೂಟ ಪ್ರದಕ್ಷಿಣೆ

07:20 AM Jan 17, 2019 | |

ಹೊಸಪೇಟೆ: ಉತ್ತರಾಯಣ ಪುಣ್ಯಕಾಲದಲ್ಲಿ ಆರಂಭಗೊಂಡಿರುವ ಮಕರ ಸಂಕ್ರಮಣದ ಅಂಗವಾಗಿ ಹಂಪಿಯ ಶ್ರೀವಿರೂಪಾಕ್ಷೇಶ್ವರಸ್ವಾಮಿ ಹಾಗೂ ಪಂಪಾಂಬಿಕಾದೇವಿ ಉತ್ಸವ ಮೂರ್ತಿಗಳ ಹೇಮಕೂಟ ಪ್ರದಕ್ಷಿಣೆ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

Advertisement

ಗಜ ವಾಹನಾರೂಢ ಉತ್ಸವ ಮೂರ್ತಿಗಳ ಶ್ರೀವಿರೂಪಾಕ್ಷ ದೇವಾಲಯದ ಪ್ರದಕ್ಷಿಣೆಯ ನಂತರ ಹೇಮಕೂಟ ಪ್ರದಕ್ಷಿಣೆ ಆರಂಭವಾಯಿತು. ದೇವಾಲಯದ ಪಟ್ಟದ ಆನೆ ಲಕ್ಷ್ಮೀ ನೇತೃತ್ವದಲ್ಲಿ ದೇವಾಲಯದ ಪುರೋಹಿತರು, ಭಕ್ತರು, ಮಂಗಳವಾದ್ಯ, ದೀವಟಿಗೆಗಳನ್ನು ಒಳಗೊಂಡ ಫ‌ಲಕ್ಕಿ ಮೆರವಣಿಗೆ ಶ್ರೀವಿರೂಪಾಕ್ಷ ರಥ ಬೀದಿ, ಹೇಮಕೂಟ ರಸ್ತೆ, ಕಡ್ಡಿರಾಂಪುರ ರಸ್ತೆ, ನಂತರ ಶ್ರೀಗಾಯತ್ರಿ ಪೀಠದ ಹಿಂಭಾಗ, ಎಂ.ಪಿ.ಪ್ರಕಾಶ ನಗರ, ತುಂಗಭದ್ರಾ ನದಿ ತೀರ, ಮನ್ಮುಖ ಹೊಂಡಗಳನ್ನು ಪ್ರದಕ್ಷಿಣೆ ಹಾಕಿ ತೇರಿನವರೆಗೆ ತೆರಳಿ ಆನಂತರ ದೇವಾಲಯದ ಆವರಣ ಪ್ರವೇಶಿಸಿತು.

ಬಳಿಕ ಕಲ್ಯಾಣ ಮಂಟಪದಲ್ಲಿ ಉತ್ಸವ ಮೂರ್ತಿಗಳಿಗೆ ತೊಟ್ಟಿಲು ಸೇವೆ, ಏಕಾಂತ ಸೇವೆಗಳನ್ನು ಸಲ್ಲಿಸುವ ಮೂಲಕ ಈ ವಿಶೇಷ ಆಚರಣೆ ಪೂರ್ಣಗೊಂಡಿತು.

ಹೇಮಕೂಟ ಪ್ರದಕ್ಷಿಣೆ ಕಾರ್ಯಕ್ರಮದ ಮಾರ್ಗದುದ್ದಕ್ಕೂ ಬರುವ ಎಪ್ಪತ್ತಕ್ಕೂ ಅಧಿಕ ದೇವತೆಗಳಿಗೆ ತೆಂಗಿನಕಾಯಿ ನೈವೇದ್ಯ, ಕರ್ಪೂರ ಆರತಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಜಾತಿ, ಧರ್ಮಗಳ ಬೇಧವಿಲ್ಲದೇ ವಿವಿಧ ಸಮುದಾಯಗಳ ಜನರು ತಮ್ಮ ಮನೆಯ ಮುಂದೆ ಆಗಮಿಸಿದ ದೇವರಿಗೆ ಎಳ್ಳು ಸಕ್ಕರೆ, ಕಬ್ಬು, ಹೂಗಳು, ತೆಂಗಿನಕಾಯಿ, ಕರ್ಪೂರ ಸಮರ್ಪಿಸಿದರು.

ಲೋಕ ಕಲ್ಯಾಣಾರ್ಥ ಗ್ರಾಮದ ಸುಭೀಕ್ಷೆ, ಸಮೃದ್ಧ ಮಳೆ-ಬೆಳೆಗಾಗಿ ಅಂದು ವಿಜಯನಗರ ಸಾಮ್ರಾಜ್ಯದ ಅರಸರು ಶ್ರೀವಿರೂಪಾಕ್ಷ ಸ್ವಾಮಿ ಹಾಗೂ ಪಂಪಾದೇವಿಯರ ಉತ್ಸವ ಮೂರ್ತಿಗಳ ಹೇಮಕೂಟ ಗಿರಿ ಪ್ರದಕ್ಷಿಣೆ ಮಾಡುವ ಸಂಪ್ರದಾಯ ಆರಂಭಿಸಿದರು.

Advertisement

ಈ ಸಂಪ್ರದಾಯವನ್ನು ಇಂದಿಗೂ ಧಾರ್ಮಿಕ ದತ್ತಿ ಇಲಾಖೆ, ದೇವಾಲಯ ಸಮಿತಿ, ಹಂಪಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಈ ವಿಶೇಷ ಉತ್ಸವವನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಡನೆ ಜರುಗಿಸಲಾಗುತ್ತಿದೆ. ವರ್ಷದಲ್ಲಿ ಎರಡು ಬಾರಿ ಅಂದರೆ ಮಕರ ಸಂಕ್ರಾಂತಿ ಹಾಗೂ ವೈಶಾಖ ಹುಣ್ಣಿಮೆಯ ದಿನ ಹೇಮಕೂಟ ಗಿರಿ ಪ್ರದಕ್ಷಿಣೆಯನ್ನು ಜರುಗಿಸುತ್ತೇವೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ರಾವ್‌ ತಿಳಿಸಿದರು.

ಹೇಮಕೂಟ ಗಿರಿ ಪ್ರದಕ್ಷಿಣೆಯ ವಿಧಿ ವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ಪಿ.ಶ್ರೀನಾಥ ಶರ್ಮಾ, ಮುರಳೀಧರ ಶಾಸ್ತ್ರಿ, ಜೆ.ಎಸ್‌.ಶ್ರೀನಾಥ್‌, ಸಹಾಯಕರಾದ ಮಂಜುನಾಥ್‌, ಅರುಣ್‌ಕುಮಾರ್‌, ಪ್ರಶಾಂತ್‌ ನೆರವೇರಿಸಿದರು. ದೆವಾಲಯ ಸಮಿತಿಯ ಶ್ರೀನಿವಾಸ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next