ಕೇವಲ ಎರಡೂವರೆ ತಾಸಿನಲ್ಲಿ ಕೋವಿಡ್ 19 ವೈರಸ್ ಸೋಂಕು ದೃಢಪಡಿಸುವ ಪಾಥೋ ಡಿಟೆಕ್ಟ್ ಕಿಟ್ ಅಭಿವೃದ್ಧಿಪಡಿಸುವ ಮೂಲಕ ಪುಣೆ ಮೂಲದ ಸೂಕ್ಷ್ಮರೋಗಾಣು ಶಾಸ್ತ್ರಜ್ಞೆ (ವೈರಾಲಜಿಸ್ಟ್) ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದು ಮೊದಲ ಮೇಡ್-ಇನ್ ಇಂಡಿಯಾ ಕೋವಿಡ್ 19 ವೈರಸ್ ಪರೀಕ್ಷಾ ಕಿಟ್ ಆಗಿದೆ. ಗುರುವಾರವಷ್ಟೇ ಮಾರುಕಟ್ಟೆ ಪ್ರವೇಶಿಸಿದ ಈ ಕಿಟ್ ಹಿಂದಿರುವ ನಾರೀ ಶಕ್ತಿ ಹೆಸರು ಮಿನಲ್ ದಖಾವೆ ಭೋಸ್ಲೆ. ವಿಶೇಷವೆಂದರೆ ಹೆಣ್ಣು ಮಗುವಿಗೆ ಜನ್ಮ ನೀಡುವ ಕೆಲವೇ ಗಂಟೆ ಮೊದಲು ಅವರು ಈ ಕಿಟ್ ಸಿದ್ಧಗೊಳಿಸಿದ್ದಾರೆ.
ಪುಣೆ ಮೂಲದ ಮೈಲ್ಯಾಬ್ಸ್ ಡಿಸ್ಕವರಿ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿರುವ ಮಿನಲ್ ನೇತೃತ್ವದ ತಂಡ ಅಭಿವೃದ್ಧಿಪಡಿಸಿರುವ ಈ ಕಿಟ್‌ನ ಉತ್ಪಾದನೆ ಮತ್ತು ಮಾರಾಟಕ್ಕೆ ಸರಕಾರದ ಅನುಮತಿ ದೊರೆತಿದ್ದು, ಬೆಂಗಳೂರು, ಪುಣೆ, ದೆಹಲಿ ಮತ್ತು ಗೋವಾದಲ್ಲಿನ ಲ್ಯಾಬ್‌ಗಳಲ್ಲಿ ಈಗಾಗಲೇ ಕಿಟ್ ಬಳಸಲಾಗುತ್ತಿದೆ.
ಒಂದು ಕಿಟ್‌ನಿಂದ 100 ಮಾದರಿಗಳ ಪರೀಕ್ಷೆ ನಡೆಸಬಹುದಾಗಿದ್ದು, ಇದು 1,200 ರೂ.ಗೆ ಲಭ್ಯವಿದೆ. ಪ್ರಸ್ತುತ ವಿದೇಶಗಳಿಂದ ತರಿಸುತ್ತಿರುವ ಒಂದು ಕಿಟ್‌ಗೆ 4,500 ರೂ. ನೀಡಲಾಗುತ್ತಿದೆ. ದೇಸಿ ಕಿಟ್ ಮೂಲಕ ಪರೀಕ್ಷೆ ನಡೆಸಿದ ಎರಡೂವರೆ ತಾಸಿನಲ್ಲಿ ಫಲಿತಾಂಶ ಲಭ್ಯವಾಗುತ್ತದೆ ಎಂದು ವೈರಾಲಜಿಸ್ಟ್ ಮಿನಲ್ ಹೇಳುತ್ತಾರೆ.
ಸಾಮಾನ್ಯವಾಗಿ ಈ ರೀತಿಯ ಕಿಟ್ ಅಭಿವೃದ್ಧಿಪಡಿಸಲು ಕನಿಷ್ಠ ನಾಲ್ಕು ತಿಂಗಳು ಬೇಕು. ಆದರೆ ಮಿನಲ್ ಮತ್ತು ತಂಡ ಪಾಥೋಡಿಟೆಕ್ಟ್ ಕಿಟ್ ಅನ್ನು ಕೇವಲ ಆರು ವಾರಗಳಲ್ಲಿ ಅಭಿವೃದ್ಧಿಪಡಿಸಿದೆ.