ಚಿಂಚೋಳಿ: ರಾಜ್ಯದ ದಕ್ಷ ಆಡಳಿತಗಾರ ಮತ್ತು ಪ್ರಾಮಾಣಿಕ ರಾಜಕಾರಣಿ ಆಗಿದ್ದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ನೆನಪು ಸದಾ ಸ್ಮರಣೀಯ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲದೇ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ವೀರೇಂದ್ರ ಪಾಟೀಲ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮಿಸಿ, ಆಶೀರ್ವಾದ ಪಡೆದ ನಂತರವೇ ಗೆಲ್ಲುವ ವಿಶ್ವಾಸದೊಂದಿಗೆ ಪ್ರಚಾರದಲ್ಲಿ ತೊಡಗುತ್ತಾರೆ.
ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ 1997ರಲ್ಲಿ ನಿಧನರಾದರು. ನಂತರ ಪಟ್ಟಣದ ನ್ಯಾಯಾಲಯದ ಬಳಿ ಇವರ ಸಮಾಧಿ ನಿರ್ಮಿಸಲಾಯಿತು. ಈ ಸಮಾಧಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಅನೇಕ ದಿಗ್ಗಜರು ಅಧಿಕಾರ ಪಡೆದುಕೊಂಡಿದ್ದಾರೆ. 1998-99 ರಲ್ಲಿ ಆಗಿನ ಕೆಪಿಸಿಸಿ (ಐ) ಅಧ್ಯಕ್ಷ ಎಸ್.ಎಂ. ಕೃಷ್ಣ ಕಾಂಗ್ರೆಸ್ ಪಕ್ಷದ ಪಾಂಚಜನ್ಯ ಯಾತ್ರೆಯನ್ನು ಇಲ್ಲಿಂದಲೇ ಪ್ರಾರಂಭಗೊಳಿಸಿದ್ದರು.
ನಂತರ ವಿಧಾನಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಜಯ ಸಾಧಿಸಿ, ಮುಖ್ಯಮಂತ್ರಿ ಸ್ಥಾನ ಪಡೆದರು. ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ ಅವರು 2004ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಜಿಪಂ ಚುನಾವಣೆ ಪ್ರಚಾರ ಇಲ್ಲಿಂದಲೇ ಪ್ರಾರಂಭಿಸಿದ್ದರು. ಆಗ ಕಲಬುರಗಿಯ ಎಲ್ಲ ಜಿಪಂ ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲಾಗಿದ್ದವು. ಅಲ್ಲದೇ 2009ರಲ್ಲಿ ಬೀದರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧರ್ಮಸಿಂಗ ಚುನಾವಣಾ ಪ್ರಚಾರವನ್ನು ಇಲ್ಲಿಂದಲೇ ಪ್ರಾರಂಭಿಸಿ ಬೀದರ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದರು.
ಕಲಬುರಗಿ ಲೋಕಸಭೆ ಚುನಾವಣೆ ಕ್ಷೇತ್ರಕ್ಕೆ ಸ್ಪಧಿರ್ಸಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ 2009 ಮತ್ತು 2014ರಲ್ಲಿ ದಿ. ವೀರೇಂದ್ರ ಪಾಟೀಲರ ಸಮಾಧಿಗೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದರು.
ನಂತರ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ (ಐ)ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಡಾ| ಉಮೇಶ ಜಾಧವ್ ಪರ ಚುನಾವಣಾ ಪ್ರಚಾರ ನಡೆಸಿ ಗೆಲುವಿಗೆ ಕಾರಣರಾಗಿದ್ದರು.
ಪಟ್ಟಣದಲ್ಲಿ ಮಾರ್ಚ್ 29ರಂದು ಕಲಬುರಗಿ ಮತ್ತು ಬೀದರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ| ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಅವರು ದಿ.ವೀರೇಂದ್ರ ಪಾಟೀಲ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ನಮಿಸಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.