ನವದೆಹಲಿ:ದೆಹಲಿ ಯೂನಿರ್ವಸಿಟಿಯಲ್ಲಿ ನಡೆದ ಜಟಾಪಟಿ ನಂತರ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ, ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ ಮೆಹರ್ ಕೌರ್ ಎಬಿವಿಪಿಯನ್ನು ವಿರೋಧಿಸಿ ತನ್ನ ಫೇಸ್ ಬುಕ್ ಪ್ರೊಫೈಲ್ ಪೇಜ್ ನಲ್ಲಿ ಹಾಕಿದ್ದ ಪ್ಲೇ ಕಾರ್ಡ್ ಬರಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ, ವಿವಾದಕ್ಕೆ ಕಾರಣವಾಗಿದೆ. ಏತನ್ಮಧ್ಯೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟರ್ ನಲ್ಲಿ ನೀಡಿರುವ ಪ್ರತಿಕ್ರಿಯೆ ಭರ್ಜರಿ ವೈರಲ್ ಆಗಿದೆ.
ಏನಿದು ವಿವಾದ?
ಇತ್ತೀಚೆಗೆ ದೆಹಲಿ ಯೂನಿರ್ವಸಿಟಿಯ ರಮ್ಜಾಸ್ ಕಾಲೇಜಿನಲ್ಲಿನ ಸಮಾರಂಭವೊಂದಕ್ಕೆ ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ಆಹ್ವಾನಿಸಿದ್ದರು. ಆದರೆ ಖಾಲಿದ್ ಆಹ್ವಾನಕ್ಕೆ ಎಬಿವಿಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದರಿಂದಾಗಿ ಕಾಲೇಜು ಆವರಣದಲ್ಲಿ ಎಬಿವಿಪಿ ಮತ್ತು ಎಐಎಸ್ ಎ ನಡುವೆ ಮಾರಾಮಾರಿ ನಡೆದಿತ್ತು.
ಈ ಘಟನೆ ಬಳಿಕ ವಿದ್ಯಾರ್ಥಿನಿ ಗುರ್ ಮೆಹರ್ ತನ್ನ ಫೇಸ್ ಬುಕ್ ಪ್ರೊಫೈಲ್ ಪೇಜ್ ನಲ್ಲಿ, ನಾನು ದೆಹಲಿ ಯೂನಿರ್ವಸಿಟಿ ವಿದ್ಯಾರ್ಥಿನಿ. ನಾನು ಎಬಿವಿಪಿಗೆ ಹೆದರಲ್ಲ, ನಾನು ಒಬ್ಬಂಟಿಯಲ್ಲ, ಇಡೀ ಭಾರತ ದೇಶದ ವಿದ್ಯಾರ್ಥಿ ಸಮೂಹ ನನ್ನೊಂದಿಗೆ ಇದೆ..ಎಂಬ ಪ್ಲೇ ಕಾರ್ಡ್ ಅನ್ನು ಅಪ್ ಡೇಟ್ ಮಾಡಿದ್ದಳು. ನೀವೂ ಎಬಿವಿಪಿಯನ್ನು ವಿರೋಧಿಸಿ ಎಂದು ಗುರ್ ಮೆಹರ್ ಕರೆ ಕೊಟ್ಟಿದ್ದರಿಂದ ಆಕೆಯ ಗೆಳೆಯರು, ಬೇರೆ ವಿವಿ ವಿದ್ಯಾರ್ಥಿಗಳು ಆಕೆ ಪ್ರೊಫೈಲ್ ಚಿತ್ರವನ್ನೇ ಶೇರ್ ಮಾಡಿಕೊಳ್ಳತೊಡಗಿದರು.
ಈ ಜಟಾಪಟಿಯಲ್ಲಿ ಈ ಹಿಂದೆ ಗುರ್ ಮೆಹರ್ ತನ್ನ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ ಬರಹ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದ ಹುಟ್ಟಿಸಲು ಕಾರಣವಾಗಿದೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್ ಮನ್ ದೀಪ್ ಸಿಂಗ್ ಅವರ ಪುತ್ರಿ ಗುರ್ ಮೆಹರ್ ಕೌರ್. ಈಕೆ ಫೇಸ್ ಬುಕ್ ನಲ್ಲಿ ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿಲ್ಲ, ಯುದ್ಧ ಅವರನ್ನು ಬಲಿ ತೆಗೆದುಕೊಂಡಿದೆ ಎಂದು ಬರೆದುಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಬಿಸಿ, ಬಿಸಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಸೆಹ್ವಾಗ್ ತಿರುಗೇಟು ವೈರಲ್:
ಗುರ್ ಮೆಹರ್ ಈ ಪೋಸ್ಟ್ ಗೆ ವೀರೇಂದ್ರ ಸೆಹ್ವಾಗ್ ಅವರು ಭಾನುವಾರ ಟ್ವೀಟ್ ಮಾಡಿದ್ದು ಹೀಗೆ…ನಾನು 2 ಬಾರಿ ತ್ರಿಶತಕವನ್ನು ಬಾರಿಸಿಲ್ಲ, ಬಾರಿಸಿದ್ದು ಬ್ಯಾಟ್! ಅಂತ ತಿರುಗೇಟು ನೀಡಿದ್ದಾರೆ.
ಪ್ರತಾಪ್ ಸಿಂಹ ಟ್ವೀಟ್ ಗೆ ಭಾರೀ ಟೀಕೆ
ಗುರ್ ಮೆಹರ್ ಕೌರ್ ಟ್ವೀಟ್ ಗೆ ಬಿಜೆಪಿ ಮುಖಂಡ, ಸಂಸದ ಪ್ರತಾಪ್ ಸಿಂಹ ಕೂಡಾ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ಅದು ವಿವಾದಕ್ಕೆ ಕಾರಣವಾಗಿ. ಗುರ್ ಮೆಹರ್ ಯೋಧನ ಮಗಳು ಹಾಗೂ ದಾವೂದ್ ಇಬ್ರಾಹಿಂ ಪೊಲೀಸನ ಮಗ ಎಂದು ಹೋಲಿಕೆ ಮಾಡಿರುವ ತಲೆಬರಹದಡಿ, 1993ರಲ್ಲಿ ನಾನು ಯಾರನ್ನೂ ಕೊಂದಿಲ್ಲ, ಬಾಂಬುಗಳು ಅವರನ್ನೆಲ್ಲಾ ಕೊಂದಿವೆ ಎಂದು ಟ್ವೀಟ್ ಮಾಡಿರುವುದು ಟೀಕೆಗೆ ಕಾರಣವಾಗಿದೆ.