ಹೊಸದಿಲ್ಲಿ: ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಗುರುವಾರ 41ನೇ ಜನ್ಮದಿನದ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಹಾಲಿ, ಮಾಜಿ ಕ್ರಿಕೆಟಿಗರಿಂದ ಶುಭಾಶಯದ ಮಹಾ ಪೂರವೇ ಹರಿದು ಬಂತು. ಎಂದಿನಂತೆ ವೀರೇಂದ್ರ ಸೆಹವಾಗ್ ಆಕರ್ಷಕ ಟ್ವೀಟ್ ಮೂಲಕ ಧೋನಿಗೆ ಶುಭ ಹಾರೈಸಿದರು. “ಎಲ್ಲ ತಂಡಗಳೂ ಧೋನಿಯಂಥ ನಾಯಕನನ್ನು ಪಡೆಯುವ ಅದೃಷ್ಟ ಹೊಂದಿರುವುದಿಲ್ಲ. ಹ್ಯಾಪ್ಪಿ ಬರ್ತ್‌ಡೇ ಟು ಎ ಜೆಮ್ ಆಫ್ ಎ ಪರ್ಸನ್ ಆ್ಯಂಡ್ ಪ್ಲೇಯರ್, ಎಂ.ಎಸ್. ಧೋನಿ. ಓಂ ಹೆಲಿಕಾಪ್ಟರಾಯ ನಮಃ’ ಎಂಬ ಸೆಹವಾಗ್ ಹಾರೈಕೆ ಎಲ್ಲರ ಮೆಚ್ಚುಗೆ ಗಳಿಸಿತು.
ಧೋನಿಯನ್ನು “ಹಿರಿಯಣ್ಣ’ ಎಂದು ಗೌರವಿಸಿದ ವಿರಾಟ್ ಕೊಹ್ಲಿ, “ನಿಮ್ಮಂಥ ನಾಯಕ ಮತ್ತೂಬ್ಬನಿಲ್ಲ. ನೀವು ನನ್ನ ಹಿರಿಯ ಅಣ್ಣನಿದ್ದಂತೆ. ನಿಮ್ಮನ್ನು ಸದಾ ಪ್ರೀತಿಸುತ್ತ ಗೌರವಿಸುತ್ತೇನೆ, ಹ್ಯಾಪ್ಪಿ ಬರ್ತ್‌ಡೇ ಸ್ಕಿಪ್’ ಎಂದು ಶುಭ ಕೋರಿದ್ದಾರೆ.
“ಅತ್ಯುತ್ತಮ ನಾಯಕ ಹಾಗೂ ಗೆಳೆಯನಿಗೆ ಜನ್ಮದಿನದ ಶುಭಾಶಯ ಗಳು’ ಎಂಬುದು ಸಚಿನ್ ತೆಂಡುಲ್ಕರ್ ಹಾರೈಕೆ. ಸುರೇಶ್ ರೈನಾ, ಡ್ವೇನ್ ಬ್ರಾವೊ ಸೇರಿದಂತೆ ಇಡೀ ಸಿಎಸ್‌ಕೆ ತಂಡ, ಬಿಸಿಸಿಐ ಕೂಡ “ಕೂಲ್ ಕ್ಯಾಪ್ಟನ್’ಗೆ ಶುಭ ಹಾರೈಸಿತು.
ರಫೆಲ್ ನಡಾಲ್-ಟೇಲರ್ ಫ್ರಿಟ್ಸ್ ನಡುವಿನ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯ ವೀಕ್ಷಿಸಿದ ಬಳಿಕ ಧೋನಿ ಲಂಡನ್‌ನಲ್ಲಿ ಕೇಕ್ ಕತ್ತರಿಸಿ ಜನ್ಮದಿನದ ಸಂಭ್ರಮ ಆಚರಿಸಿದರು. ಪತ್ನಿ ಸಾಕ್ಷಿ, ಆತ್ಮೀಯರು, ರಿಷಭ್ ಪಂತ್ ಅವರೆಲ್ಲ ಸಾಕ್ಷಿಯಾದರು. ಬಳಿಕ ಇದರ ಕಿರು ವೀಡಿಯೋ ಒಂದನ್ನು ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು.
ವಿಜಯವಾಡದಲ್ಲಿ ಅಭಿಮಾನಿಗಳು ಧೋನಿಯ 41 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನ ವ್ಯಕ್ತಪಡಿಸಿದರು. ರಾಂಚಿಯಲ್ಲಿ ಚಿಣ್ಣರೆಲ್ಲ ಸೇರಿ ತಮ್ಮೂರಿನ ಹೆಮ್ಮೆಯ ಕ್ರಿಕೆಟಿಗನಿಗೆ ಜನ್ಮದಿನದ ಶುಭಾಶಯ ಸಲ್ಲಿಸಿದರು.