ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಪಂದ್ಯದಲ್ಲಿ ಭಾನುವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 56 ರನ್ ಗಳ ಸೋಲನ್ನು ಅನುಭವಿಸಿತು. ಪಂದ್ಯದ ಬಳಿಕ ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಅವರು ಎಲ್ಎಸ್ ಜಿ ತಂಡದ ನಾಯಕ ಮತ್ತು ಕೋಚ್ ಗಳ ಮೇಲೆ ಪ್ರಶ್ನೆ ಮಾಡಿದ್ದಾರೆ.
228 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಎಲ್ಎಸ್ ಜಿ ಉತ್ತಮ ಆರಂಭ ಪಡೆದಿತ್ತು. ತಂಡವು 12.1 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 114 ರನ್ ಕಲೆ ಹಾಕಿತ್ತು. ಆದರೆ ನಂತರ ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ ಎಲ್ಲರೂ ದೊಡ್ಡ ರನ್ ಕಲೆ ಹಾಕುವಲ್ಲಿ ವಿಫಲರಾಗುವುದರೊಂದಿಗೆ ರನ್ ಗಳಿಸುವ ವೇಗವು ಬೇಗನೆ ಕುಸಿಯಿತು.
ಪಂದ್ಯದ ನಂತರ, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಅವರು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್ ಕ್ರಮಾಂಕದ ನಿರ್ಧಾರವನ್ನು ಒಳಗೊಂಡಂತೆ ತಂಡದ ನಿರ್ವಹಣೆಯ ಬಗ್ಗೆ ಪ್ರಶ್ನೆ ಮಾಡಿದರು.
“10 ಓವರ್ ಗಳ ನಂತರ ಅವರು 102/1 ಹಂತದಲ್ಲಿದ್ದರು. ಅದರ ನಂತರ ಅವರು ಇಷ್ಟು ಅಂತರದಿಂದ ಸೋಲಬಾರದಿತ್ತು. ಆ ಮೊದಲ ವಿಕೆಟ್ ನಂತರ, ಇನ್-ಫಾರ್ಮ್ ಬ್ಯಾಟರ್ ಬರಬೇಕಿತ್ತು ಎಂದು ನಾನು ನಂಬುತ್ತೇನೆ; ಅದು ಪೂರನ್, ಮಾರ್ಕಸ್ ಸ್ಟೊಯಿನಿಸ್ ಆಗಿರಬಹುದು, ಕೃನಾಲ್ ಪಾಂಡ್ಯ ಅವರೇ ಅಥವಾ ಆಯುಷ್ ಬದೋನಿ ಬರಬಹುದಿತ್ತು. ಆದರೆ ಬಂದವರುಯಾರು? ಹೂಡಾ!” ಎಂದು ಸೆಹವಾಗ್ ಹೇಳಿದರು.
“ಅದೇ ಕ್ಷಣದಲ್ಲಿ ಲಕ್ನೋ ಪಂದ್ಯ ಸೋತಿತು. ಅಲ್ಲೇ ಎಲ್ ಸಿಜಿ ತಪ್ಪು ಮಾಡಿತು. ಒಂದು ವೇಳೆ ಆ ಕ್ಷಣದಲ್ಲಿ ಪೂರನ್ ಬಂದಿದ್ದರೆ ಅವರು ಬ್ಯಾಟಿಂಗ್ ಮಾಡುವ ರೀತಿಗೆ ಪಂದ್ಯದ ಫಲಿತಾಂಶ ಬದಲಾಗುತ್ತಿತ್ತು” ಎಂದು ಸೆಹವಾಗ್ ಹೇಳಿದರು.