ಮುಂಬೈ: ಟೀ ಇಂಡಿಯಾದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ವಿರಾಟ್ ಕೊಹ್ಲಿ ಅವರು ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದ ಬಳಿಕ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವವನ್ನೂ ತ್ಯಜಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆ ವಿರಾಟ್ ಮೂರು ಮಾದರಿಯ ನಾಯಕತ್ವವನ್ನು ಬಿಡಬೇಕು ಎಂದು ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಫ್ರಿದಿ, “ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ನಾಯಕತ್ವವನ್ನು ತ್ಯಜಿಸಬೇಕು ಮತ್ತು ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಖ್ಯಾತ ಫುಟ್‌ಬಾಲ್ ಆಟಗಾರ ಆಗ್ವೆರೊಗೆ ಹೃದಯ ಸಮಸ್ಯೆ: ಸದ್ಯದಲ್ಲೇ ನಿವೃತ್ತಿ?
“ವಿರಾಟ್ ಕೇವಲ ಆಟಗಾರನಾಗಿ ಮುಂದುವರಿಯುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಆಗ ಕಡಿಮೆ ಒತ್ತಡ ಇರುತ್ತದೆ, ಅವರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ತಮ್ಮ ಕ್ರಿಕೆಟ್ ಮತ್ತು ಬ್ಯಾಟಿಂಗ್ ಅನ್ನು ಆನಂದಿಸುತ್ತಾರೆ. ತಂಡದ ನಾಯಕತ್ವವು ಸುಲಭವಲ್ಲ, ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ ನೀವು ಎಲ್ಲಿಯವರೆಗೆ ಉತ್ತಮ ನಾಯಕತ್ವ ವಹಿಸುತ್ತೀರೋ ಅಲ್ಲಿಯವರೆಗೆ ಎಲ್ಲವೂ ಸುಗಮವಾಗಿ ಸಾಗುತ್ತದೆ” ಎಂದು ಅವರು ಹೇಳಿದರು.
ರೋಹಿತ್ ಅವರ ಮನಸ್ಥಿತಿಯು ಅವರನ್ನು ಅತ್ಯುತ್ತಮ ಆಟಗಾರನಾಗಿ ಮಾಡಿದೆ. ರೋಹಿತ್ ಅಗತ್ಯವಿದ್ದಾಗ ಆಕ್ರಮಣಶೀಲತೆಯನ್ನು ತೋರಿಸುತ್ತಾರೆ ಎಂದು ಅಫ್ರಿದಿ ಸೇರಿದರು.