ಸೌಥಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಜೂನ್ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಲ್ಲಿನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯವಾಡಲಿದೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ ಮುಂಬೈನಿಂದ ಹೊರಟು ಈಗಾಗಲೇ ಸೌಥಂಪ್ಟನ್ ನಲ್ಲಿ ಕ್ವಾರಂಟೈನ್ ನಲ್ಲಿದೆ. ಲಂಡನ್ ಗೆ ವಿಮಾನದಲ್ಲಿ ಬಂದಿಳಿದ ತಂಡ ಅಲ್ಲಿಂದ ನೇರವಾಗಿ ಬಸ್ ಮೂಲಕ ಸೌಥಂಪ್ಟನ್ ಗೆ ಬಂದಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ತಾರಾ ದರ್ಜೆಯ ಹೋಟೆಲ್ ಇರುವ ಕಾರಣ ಇಲ್ಲೇ ಕ್ವಾರಂಟೈನ್ ಆಗಿ ನಂತರ ಅಭ್ಯಾಸ ನಡೆಸಲಿದೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಜಸ್ ಬೌಲ್ ಕ್ರೀಡಾಂಗಣ ಫೋಟೊವೊಂದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಗ್ಯಾಲರಿಯಲ್ಲಿ ನಿಂತಿರುವ ವಿರಾಟ್ ತನ್ನ ಹಿಂದಿನಿಂದ ಮೈದಾನ ಕಾಣುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಜೂನ್ 18ರಂದು ಕಿವೀಸ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಸುಮಾರು 40 ದಿನಗಳ ಅಂತರದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.