ನಾಗ್ಪುರ: ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಸೀಸ್ ಗೆ ಸ್ಪರ್ಧಾತ್ಮಕ ಗುರಿ ನೀಡಿದೆ. ನಾಯಕ ವಿರಾಟ್ ಕೊಹ್ಲಿಯ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ 48.2 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 250 ರನ್ ಗಳಿಸಿದೆ.
ಟಾಸ್ ಸೋತರು ಬ್ಯಾಟಿಂಗ್ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಉಪ ನಾಯಕ ರೋಹಿತ್ ಶರ್ಮಾ ಶೂನ್ಯ ಸಂಪಾದನೆಯೊಂದಿಗೆ ಮೊದಲ ಓವರ್ ನಲ್ಲೇ ಪೆವಿಲಿಯನ್ ಸೇರಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಶಿಖರ್ ಧವನ್ 21 ರನ್ ಗಳಿಸಿ ಔಟಾದರು.
ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆದ ಅಂಬಾಟಿ ರಾಯುಡು ಗಳಿಕೆ ಕೇವಲ 18 ರನ್. ಇದಕ್ಕಾಗಿ ರಾಯುಡು ಎದುರಿಸಿದ್ದು 32 ಎಸೆತ. ವಿಜಯ್ ಶಂಕರ್ 46 ರನ್ ಗಳಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ಆಸರೆಯಾದರೆ, ಕಳೆದ ಪಂದ್ಯದ ಹೀರೋಗಳಾದ ಕೇದಾರ್ ಜಾಧವ್ ಮತ್ತು ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಮ್ಯಾಜಿಕ್ ಮಾಡಲಿಲ್ಲ. ಧೋನಿ ಗೋಲ್ಡನ್ ಡಕ್ ಅವಮಾನಕ್ಕೆ ತುತ್ತಾದರೆ, ಕೇದಾರ್ ಗಳಿಕೆ ಕೇವಲ 11 ರನ್.
ಕೊಹ್ಲಿ 40 ನೇ ಶತಕ: ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ನಾಯಕ ಕೊಹ್ಲಿ ತಮ್ಮ ಏಕದಿನ ಬಾಳ್ವೆಯ 40 ನೇ ಶತಕ ಬಾರಿಸಿದರು. ಒಟ್ಟು 120 ಎಸೆತ ಎದುರಿಸಿದ ವಿರಾಟ್ 116 ರನ್ ಗಳಿಸಿ ಕುಸಿಯುತ್ತಿದ್ದ ಭಾರತದ ಬ್ಯಾಟಿಂಗ್ ಗೆ ಆಸರೆಯಾದರು. ನಾಲ್ಕನೇ ವಿಕೆಟ್ ಗೆ ವಿಜಯ್ ಶಂಕರ್ ಜೊತೆ 81 ರನ್ ಜೊತೆಯಾಟ ನಡೆಸಿದ ಕೊಹ್ಲಿ ಜಡೇಜಾ ಜೊತೆ 67 ರನ್ ಜೊತೆಯಾಟ ನಡೆಸಿದರು.
ಆಸೀಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಪ್ಯಾಟ್ ಕಮಿನ್ಸ್ ನಾಲ್ಕು ವಿಕೆಟ್ ಕಿತ್ತರು. ಸ್ಪಿನ್ನರ್ ಆಡಂ ಜಾಂಪಾ ಎರಡು ವಿಕೆಟ್ ಕಿತ್ತರು 62 ರನ್ ನೀಡಿ ದುಬಾರಿಯಾದರು