ಅಡಿಲೇಡ್: ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಲು ರವಿವಾರ ಅಡಿಲೇಡ್‌ಗೆ ಆಗಮಿಸಿದ ಭಾರತ ಟೆಸ್ಟ್ ತಂಡಕ್ಕೆ “ಭಾರತ್ ಆರ್ಮಿ’ ಸದಸ್ಯರು ಸ್ವಾಗತ ಕೋರಿದರು. ಸಿಡ್ನಿಯಲ್ಲಿ “ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್’ ವಿರುದ್ಧದ ಅಭ್ಯಾಸ ಪಂದ್ಯ ಮುಗಿಸಿದ ಬಳಿಕ ಟೀಮ್ ಇಂಡಿಯಾ ಅಡಿಲೇಡ್‌ಗೆ ಬಂದಿಳಿದಿತ್ತು.
“ಭಾರತ್ ಆರ್ಮಿ’ ಭಾರತೀಯ ಕ್ರಿಕೆಟಿಗರನ್ನು ಬೆಂಬಲಿಸುವ ಅಭಿಮಾನಿಗಳ ಸಂಘಟನೆಯಾಗಿದ್ದು, ಕ್ರಿಕೆಟ್ ದೇಶಗಳಲ್ಲೆಲ್ಲ ಇದರ ಶಾಖೆಗಳಿವೆ.
ಭಾರತ ತಂಡ ಅಡಿಲೇಡ್‌ಗೆ ಬಂದಿಳಿದ ಚಿತ್ರವನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದೆ. “ಭಾರತ್ ಆರ್ಮಿ’ಯ ಧ್ವಜ ಹಿಡಿದು ನಿಂತಿದ್ದ ಸದಸ್ಯರನ್ನೂ ಇದರಲ್ಲಿ ಕಾಣಬಹುದಾಗಿದೆ.ಸರಣಿಯ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಇಲ್ಲಿನ “ಅಡಿಲೇಡ್ ಓವಲ್’ನಲ್ಲಿ ಆರಂಭವಾಗಲಿದೆ.
ಟಿಪಿಕಲ್ ಅಡಿಲೇಡ್ ಪಿಚ್
ಭಾರತ-ಆಸ್ಟ್ರೇಲಿಯ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧಗೊಳ್ಳುತ್ತಿರುವ ಅಡಿಲೇಡ್ ಪಿಚ್‌ನಲ್ಲಿ ವಿಶೇಷವೇನಿಲ್ಲ, ಇದನ್ನು ಮಾಮೂಲು ರೀತಿಯಲ್ಲೇ ತಯಾರಿಸಲಾಗುತ್ತಿದೆ, ಇದೊಂದು ಟಿಪಿಕಲ್ ಅಡಿಲೇಡ್ ಪಿಚ್ ಎಂಬುದಾಗಿ ಅಂಗಳದ ಕ್ಯುರೇಟರ್ ಡೇಮಿಯನ್ ಹ್ಯೂ ಹೇಳಿದ್ದಾರೆ.
“ಶೆಫೀಲ್ಡ್ ಶೀಲ್ಡ್ ಪಂದ್ಯಗಳಿಗಾಗಿ ಯಾವ ರೀತಿ ಪಿಚ್ ನಿರ್ಮಾಣ ಮಾಡಲಾಗುತ್ತಿತ್ತೋ ಅದೇ ಮಾದರಿಯನ್ನು ಟೆಸ್ಟ್ ಪಂದ್ಯಕ್ಕೂ ಅಳವಡಿಸಲಾಗಿದೆ. ಒಂದೇ ಒಂದು ಬದಲಾವಣೆಯೆಂದರೆ, ಬೆಳಗ್ಗೆ ಬೇಗನೇ ಇದಕ್ಕೆ ಹಾಕಿದ್ದ ಹೊದಿಕೆಯನ್ನು ತೆಗೆದು, ಬೇಗನೇ ಕೆಲಸ ಆರಂಭಿಸುತ್ತಿದ್ದೇವೆ. ಪಂದ್ಯ ಹೆಚ್ಚು ಸ್ಪರ್ಧಾತ್ಮಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಪಿಚ್ ಮೇಲೆ ಸ್ವಲ್ಪ ಹುಲ್ಲನ್ನು ಬಿಡಲಾಗುತ್ತದೆ. ಇದರಿಂದ ಬ್ಯಾಟ್-ಬಾಲ್ ನಡುವೆ ಉತ್ತಮ ಸಮತೋಲನ ಕಂಡುಬರುತ್ತದೆ’ ಎಂದು ಹ್ಯೂಹೇಳಿದರು.