Advertisement

ನಿರಾಶ್ರಿತ ಮಕ್ಕಳೆದುರು ಸಾಂತಾಕ್ಲಾಸ್‌ ಆದ ಕೊಹ್ಲಿ

10:25 AM Dec 22, 2019 | Sriram |

ಕೋಲ್ಕತ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಜಗಳಗಳಿಗೆ, ಆಕ್ರಮಣಕಾರಿ ಮನೋಭಾವಕ್ಕೆ ಹೆಸರುವಾಸಿ. ಹಾಗೆಯೇ ನೇರನಿಷ್ಠುರ ಸ್ವಭಾವದವರೂ ಹೌದು. ಇವೆಲ್ಲದರ ಮಧ್ಯೆ ಕೊಹ್ಲಿಯಲ್ಲಿ ಯಾರಿಗೂ ಕಾಣದ ಮಾನವೀಯ ಸ್ವಭಾವವೊಂದು ಅಡಗಿಕೊಂಡಿದೆ.

Advertisement

ತಾರಾ ಜಗತ್ತಿನಲ್ಲಿ ಬದುಕುತ್ತಿರುವ, ಅವರ ಶ್ರೀಮಂತ ಮುಖ ಜಗತ್ತಿಗೆ ತೆರೆದುಕೊಂಡಿದ್ದರೂ, ಈ ಮುಖ ಹಾಗೆಯೇ ಕಗ್ಗತ್ತಲಲ್ಲೇ ಉಳಿದುಕೊಂಡಿತ್ತು. ಈ ಬಾರಿಯ ಕ್ರಿಸ್ಮಸ್‌ ಪ್ರಯುಕ್ತ ಕೋಲ್ಕತದಲ್ಲಿನ, ನಿರಾಶ್ರಿತ ಮಕ್ಕಳ ಕೇಂದ್ರಕ್ಕೆ ಕೊಹ್ಲಿ ದಿಢೀರ್‌ ಭೇಟಿ ನೀಡಿದ್ದಾರೆ, ಅದೂ ಸಾಂತಾಕ್ಲಾಸ್‌ ರೂಪದಲ್ಲಿ. ಈ ಮೂಲಕ ತಮ್ಮ ಇನ್ನೊಂದು ಮುಖವನ್ನು ಅನಾವರಣ ಮಾಡಿದ್ದಾರೆ.

ಕ್ರಿಸ್ಮಸ್‌ಗೆ ಇನ್ನೂ ಕೆಲವು ದಿನ ಬಾಕಿಯಿದ್ದರೂ, ಸಾಂತಾಕ್ಲಾಸ್‌ ರೂಪದಲ್ಲಿ ಕೊಹ್ಲಿ ಕಾಣಿಸಿಕೊಂಡರು, ಮಕ್ಕಳಿಗೆ ಕಾಣಿಕೆಗಳನ್ನು ನೀಡಿ, ಸಿಹಿ ಹಂಚಿದರು. ಆ ಮಕ್ಕಳು ಸಂತೋಷದಲ್ಲಿ ಕುಣಿದಾಡಿದವು. ಆದರೆ ಅವರು ಯಾರಿಗೂ, ಈ ವ್ಯಕ್ತಿ ಲಕ್ಷಾಂತರ ಜನರು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕೆಂದು ಕಾತರಿಸುವ, ವಿಶ್ವವಿಖ್ಯಾತ ಕ್ರಿಕೆಟಿಗ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯೆಂದು ಗೊತ್ತಿರಲಿಲ್ಲ!

ಆ ಮಕ್ಕಳು ಅತ್ಯಂತ ಮುಗ್ಧವಾಗಿ ಸಾಂತಾಕ್ಲಾಸ್‌ ಬಳಿ, ನಾವು ಕೊಹ್ಲಿಯನ್ನು ಭೇಟಿಯಾಗಲು ಸಾಧ್ಯವೇ ಎಂದು ಕೇಳಿದ್ದಾರೆ. ಅಂತಹ ಅಚ್ಚರಿಯ ಪ್ರಶ್ನೆ ಹೊರಬಿದ್ದಾಗ ಕೊಹ್ಲಿ ತಮ್ಮ ಸಾಂತಾಕ್ಲಾಸ್‌ ವೇಷ ಕಳಚಿ, ಅವರೆದುರು ನಿಂತಿದ್ದಾರೆ. ಮಕ್ಕಳು ಆನಂದದಲ್ಲಿ ತೇಲಿ ಹೋಗಿದ್ದಾರೆ.

ಇದು ತನ್ನ ಜೀವನದ ಅತ್ಯಂತ ಆನಂದದ ಕ್ಷಣವೆಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಈ ಮಕ್ಕಳು ನಮಗಾಗಿ ವರ್ಷವಿಡೀ ಚಪ್ಪಾಳೆ ತಟ್ಟುತ್ತಾರೆ, ಅಂತಹ ಮಕ್ಕಳ ಮುಖದಲ್ಲಿ ಸಂತೋಷ ತರುವ ಅವಕಾಶ ನನಗೆ ಸಿಕ್ಕಿತು ಎಂದು ಸಂಭ್ರಮಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next