ಮುಂಬೈ: ನ್ಯೂಜಿಲ್ಯಾಂಡ್ ಸರಣಿ ಮುಗಿದು ಸದ್ಯ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಆಟಗಾರರು ಇನ್ನು ಕೆಲವೇ ದಿನಗಳಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಮೊದಲು ಟೆಸ್ಟ್ ಸರಣಿ ನಂತರ ಏಕದಿನ ಸರಣಿಯನ್ನು ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಆಡಲಿದೆ.
ಟೆಸ್ಟ್ ಉಪನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸದ ವೇಳೆ ಗಾಯಗೊಂಡಿದ್ದು, ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಇಂಡಿಯಾ ಎ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ವಿರಾಟ್ ಕೊಹ್ಲಿ ಅವರು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ. ಟೆಸ್ಟ್ ಸರಣಿ ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರು ಭಾರತಕ್ಕೆ ಬರಲಿದ್ದಾರೆ. ಮಗಳು ವಮಿಕಾಳ ಮೊದಲ ವರ್ಷದ ಹುಟ್ಟುಹಬ್ಬದ ಕಾರಣಕ್ಕೆ ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಆಸ್ಟ್ರೇಲಿಯದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಐಸಿಸಿ ತಿಂಗಳ ಆಟಗಾರ
ಜನವರಿ 11 ವಮಿಕಾ ಹುಟ್ಟುಹಬ್ಬವಿದೆ. ಸರಣಿಯ ಅಂತಿಮ ಟೆಸ್ಟ್ ಜ.11ರಿಂದ 15ರವರೆಗೆ ನಡೆಯಲಿದೆ. ಟೆಸ್ಟ್ ಸರಣಿ ಮುಗಿದ ಬಳಿಕ ವಿರಾಟ್ ಕೊಹ್ಲಿ ಕುಟುಂಬಿಕರ ಜೊತೆ ಸೇರಿ ಮಗಳ ಮೊದಲ ವರ್ಷದ ಬರ್ತ್ ಡೇ ಆಚರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಏಕದಿನ ಸರಣಿ ಜ.19ರಿಂದ ಆರಂಭವಾಗಲಿದೆ.
ಕೆಲ ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆಯಲಾಗಿತ್ತು. ರೋಹಿತ್ ಶರ್ಮಾರಿಗೆ ಈ ಜವಾಬ್ದಾರಿ ನೀಡಲಾಗಿದೆ. ಟೆಸ್ಟ್ ತಂಡಕ್ಕೆ ಮಾತ್ರ ವಿರಾಟ್ ನಾಯಕರಾಗಿದ್ದಾರೆ.