ದುಬೈ: ಐಪಿಎಲ್ ಕೂಟ ಕೊನೆಯ ಹಂತ ತಲುಪುತ್ತಿದ್ದಂತೆ ರೋಚಕತೆ ಜಾಸ್ತಿಯಾಗುತ್ತಿದೆ. ಪ್ಲೇ ಆಫ್ ತಲುಪಲು ತಂಡಗಳು ರೋಚಕ ಸೆಣಸಾಟದಲ್ಲಿದೆ. ಪ್ರತಿ ಪಂದ್ಯದ ನಂತರವೂ ಪ್ಲೇ ಆಫ್ ಲೆಕ್ಕಾಚಾರಗಳು ಬದಲಾಗುತ್ತಿದೆ. ಈ ಮಧ್ಯೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯ ತೋರಿದ ಒಂದು ವರ್ತನೆಯ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿದೆ. ಆದರೆ ಈ ಪಂದ್ಯದಲ್ಲಿ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿಯ ಮುಖಾಮುಖಿ ಈಗ ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ.
ಆರ್ ಸಿಬಿ ನೀಡಿದ ಗುರಿಯನ್ನು ಬೆನತ್ತಿದ್ದ ಮುಂಬೈಗೆ ಸೂರ್ಯಕುಮಾರ್ ಯಾದವ್ ಸಹಾಯವಾದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ರನ್ನು ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿ ಔಟ್ ಮಾಡಲು ಪ್ರಯತ್ನ ಪಟ್ಟರು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಸೂರ್ಯಕುಮಾರ್ ಯಾದವ್ ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತರು.
ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಭಾರತೀಯ ತಂಡಕ್ಕೆ ಆಯ್ಕೆಯಾಗದ ಬೇಸರದಲ್ಲಿರುವ ಸೂರ್ಯಕುಮಾರ್ ಯಾದವ್ ಗೆ ನೆಟ್ಟಿಗರು ಬೆಂಬಲವಾಗಿ ನಿಂತಿದ್ದರು. ಉತ್ತಮ ಪ್ರತಿಭೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ಟೀಂ ಇಂಡಿಯಾ ನಾಯಕ ಸ್ಲೆಡ್ಜಿಂಗ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.