Advertisement

ಮೂಡಬಿದಿರೆಯಲ್ಲೊಬ್ಬ ವಿರಾಟ್‌ ಕೊಹ್ಲಿ

03:00 AM Jul 13, 2017 | Team Udayavani |

ಮಹಾನಗರ: ಸಭೆ, ಸಮಾರಂಭಗಳಿಗೆ ಇವರು ತೆರಳಿದರೆ ಸಾಕು. ಜನರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಹುಡುಗಿಯರು ತಾವಾಗಿಯೇ ಮಾತನಾಡಿಸುತ್ತಾರೆ. ಅಷ್ಟಕ್ಕೂ ಇವರೇನು ದೊಡ್ಡ ಸೆಲೆಬ್ರಿಟಿ ಅಲ್ಲ; ಬದಲಾಗಿ ಇವರೊಬ್ಬ ಉದ್ಯಮಿ. ಇವರನ್ನು ಕಂಡರೆ ಜನ ಮುಗಿಬೀಳಲು ಕಾರಣವೆಂದರೆ ಕ್ರಿಕೆಟ್‌ ಆಟಗಾರ ವಿರಾಟ್‌ ಕೊಹ್ಲಿಯವರನ್ನು ಹೋಲುವುದು. ಮೂಡಬಿದಿರೆಯ ಸಚಿನ್‌ ಲಾಯ್ಡ್ ಮಿಥುನ್‌ ಫೆರ್ನಾಂಡೀಸ್‌ ಅವರು ಇವೆಂಟ್‌ ಮ್ಯಾನೇಜ್‌ಮೆಂಟ್‌ ಜತೆಗೆ ಇತರ ಉದ್ಯಮದಲ್ಲಿದ್ದಾರೆ. ಕ್ರಿಕೆಟ್‌ ಜಗತ್ತಿನಲ್ಲಿ ಕೊಹ್ಲಿ ಪ್ರಸಿದ್ಧರಾಗುತ್ತಿದ್ದಂತೆ ಇವರ ಅಭಿಮಾನಿಗಳೂ ಹೆಚ್ಚಾದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಕಾಂ ಪದವಿ ಪಡೆದ ಸಚಿನ್‌, ಎಲ್ಲೇ ಹೋದರೂ ಅವರನ್ನು ಕೊಹ್ಲಿ ಎಂದೇ ಜನ ಗುರುತಿಸುವುದಂತೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌ನಲ್ಲೂ ಇವರದ್ದೇ ಸುದ್ದಿ.

Advertisement

ಸೆಲೆಬ್ರಿಟಿಗಳಿಗೂ ಈತ ಸೆಲೆಬ್ರಿಟಿ
ಸಚಿನ್‌ ಅವರು ಮೈಸೂರಿಗೆ ತೆರಳಿದ್ದಾಗ ಬಿಗ್‌ ಬಾಸ್‌ನ ಪ್ರಥಮ್‌ ಕೂಡ ಇವರನ್ನು ಕೊಹ್ಲಿ ಎಂದೇ ಭಾವಿಸಿ ಮಾತನಾಡಿಸಿದರಂತೆ. ಗೆಳೆಯರೊಂದಿಗೆ ಗೋವಾ ತೆರಳಿದ್ದಾಗ ಸಿನೆಮಾ ಚಿತ್ರೀಕರಣದಲ್ಲಿ ತೊಡಗಿದ್ದ ತಂಡವೊಂದು ಇವರಿಗೆ ಕೊಹ್ಲಿಯಂತೆ ಕಾಣುತ್ತಿರಿ ಎಂಬ ಪಟ್ಟ ನೀಡಿತ್ತಂತೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಪಂದ್ಯ ವೀಕ್ಷಿಸಲು ತೆರಳಿದ್ದಾಗ ಅಲ್ಲಿನ ಜನ ಇವರನ್ನು ಕೊಹ್ಲಿ ಎಂದು ಮುತ್ತಿಗೆ ಹಾಕಿದ್ದರಂತೆ.

ಕ್ರಿಕೆಟ್‌ ಎಂದರೆ ಇಷ್ಟ
ರೋಟರ್‌ ಆ್ಯಕ್ಟ್ ಮೂಡಬಿದಿರೆ ವಲಯದ ಅಧ್ಯಕ್ಷರಾದ ಸಚಿನ್‌ರಿಗೆ ಎಳೆ ವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ. ಈ ಹಿನ್ನೆಲೆಯಲ್ಲಿ ಸಮಯ ಸಿಕ್ಕಾಗ ಗೆಳೆಯರೊಂದಿಗೆ ಬ್ಯಾಟ್‌ ಹಿಡಿದು ಮೈದಾನದ ಕಡೆಗೆ ಹೊರಡುತ್ತಾರೆ. ಅದನ್ನು ಹೊರತುಪಡಿಸಿದರೆ ಲಾಂಗ್‌ ಡ್ರೈವ್‌ ಹೋಗುತ್ತಾರೆ. ಸಂಗೀತದ ಮೇಲಿರುವ ವಿಪರೀತ ವ್ಯಾಮೋಹ ಅವರನ್ನು ಡಿಜೆಯಾಗಿ ತೊಡಗಿಸಿಕೊಳ್ಳಲು ನೆರವಾಗಿದೆ. 

ಸಿನಿಮಾಗಳಿಗೂ ಆಫರ್‌
ಸಚಿನ್‌ರಿಗೆ ಈಗಾಗಲೇ ಚಿತ್ರರಂಗದಿಂದಲೂ ಆಹ್ವಾನ ಬಂದಿದೆಯಂತೆ. ಎರಡು ತುಳು ಚಿತ್ರದ ಕಥೆಗಳನ್ನು ಸಚಿನ್‌ ಕೇಳಿದ್ದು, ಉದ್ಯಮದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡ ಬಳಿಕ ಚಿತ್ರರಂಗದತ್ತ ಮುಖ ಮಾಡುತ್ತೇನೆ ಎನ್ನುತ್ತಾರೆ ಸಚಿನ್‌.


ಕೊಹ್ಲಿ ಸ್ಟೈಲ್‌ ಕಾಪಿ ಮಾಡಲ್ಲ

ನಾನು ನೋಡಲು ಸ್ವಲ್ಪ ಕೊಹ್ಲಿಯಂತೆ ಕಾಣಬಹುದು. ಆದರೆ ನನ್ನ ಸ್ಟೈಲ್‌ ಉಡುಗೆ ತೊಡುಗೆಗಳಲ್ಲಿ ಅವರನ್ನು ಕಾಪಿ ಮಾಡಲ್ಲ. ಆದರೆ ಸ್ನೇಹಿತರು ಕೊಹ್ಲಿಯಂತೆ ಸ್ಟೈಲ್‌ ಮಾಡು. ಆಗ ಇನ್ನೂ ಸುಂದರವಾಗಿ ಕಾಣುತ್ತಿ ಎನ್ನುತ್ತಾರೆ. ನನಗೆ ನನ್ನದೇ ಸ್ಟೈಲ್‌ ಇದೆ. ಅದರ ಮೇಲೆ ಆಸಕ್ತಿ.
– ಸಚಿನ್‌, ಉದ್ಯಮಿ

Advertisement

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next