ಕೋಲ್ಕತ್ತಾ: ಆರ್ ಸಿಬಿ ಮತ್ತು ಕೆಕೆಆರ್ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯವು ಅತ್ಯಂತ ರೋಚಕವಾಗಿ ನಡೆದಿದೆ. ಕೊನೆಯ ಎಸೆತದವರೆಗೆ ಸಾಗಿದ ಪಂದ್ಯದಲ್ಲಿ ಕೆಕೆಆರ್ ಒಂದು ರನ್ ಅಂತರದ ಗೆಲುವು ಸಾಧಿಸಿತು.
ಆದರೆ ಈ ಪಂದ್ಯದಲ್ಲಿ ಅಂಪೈರ್ ತೀರ್ಮಾನವು ಹೈಲೈಟ್ ಆಗಿದೆ. ಆರ್ ಸಿಬಿ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಫುಲ್ ಟಾಸ್ ಎಸೆತದಲ್ಲಿ ಔಟ್ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಗೆ ಹರ್ಷಿತ್ ರಾಣಾ ಅವರು ಸ್ಲೋವರ್ ಫುಟ್ ಟಾಸ್ ಎಸೆದರು. ಅಚಾನಾಕ್ ಆಗಿ ಬಂದ ಎಸೆತದಿಂದ ಗಾಬರಿಯಾದ ವಿರಾಟ್ ಎಸೆತವನ್ನು ತಡೆಯಲು ಹೋದರು. ಆದರೆ ಅದನ್ನು ರಾಣಾ ಕ್ಯಾಚ್ ಹಿಡಿದರು. ಇದು ನೋ ಬಾಲ್ ಎಂದು ಕೂಡಲೇ ವಿರಾಟ್ ಹೇಳಿದರು.
ಆದರೆ ಮೂರನೇ ಅಂಪೈರ್ ಇದು ನೋ ಬಾಲ್ ಅಲ್ಲ, ವಿರಾಟ್ ಸೊಂಟದ ಎತ್ತರಕ್ಕಿಂತ ಬಾಲ್ ಕೆಳಗಿದೆ ಎಂದು ಹೇಳಿ ಔಟ್ ನೀಡಿದರು. ಇದರಿಂದ ಕೋಪಗೊಂಡ ವಿರಾಟ್ ಅಂಪೈರ್ ಜತೆ ವಾಗ್ವಾದ ನಡೆಸಿದರು. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಈ ಅಂಪೈರಿಂಗ್ ತೀರ್ಮಾನದ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳು ಕೇಳಿಬಂದಿದೆ. ಕೆಲವರು ಸಮರ್ಥಿಸಿಕೊಂಡರೆ, ಹಲವರು ಟೀಕೆ ಮಾಡಿದ್ದಾರೆ. ಕೆಲವು ಕಾಮೆಂಟೇಟರ್ ಗಳು ನಿಯಮ ಬದಲಾವಣೆಯಾಗಬೇಕು ಎಂದಿದ್ದಾರೆ.
ಈ ಬಗ್ಗೆ ಪ್ರಸಾರಕ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಸ್ಪಷ್ಟನೆ ನೀಡಿದ್ದು, “ಅಧಿಕೃತ ನಿಯಮ ಪುಸ್ತಕದ ಪ್ರಕಾರ ವಿರಾಟ್ ಔಟ್ ಆಗಿದ್ದರು. ಒಂದು ಎಸೆತವನ್ನು ನೋ ಬಾಲ್ ಎಂದು ಪರಿಗಣಿಸಬೇಕಾದರೆ, ಚೆಂಡು ಕ್ರೀಸ್ ದಾಟುವಾಗ ಸೊಂಟದ ಎತ್ತರದಲ್ಲಿರಬೇಕು ಎಂದು ನಿಯಮ ಹೇಳುತ್ತದೆ. ಆದರೆ ಕೊಹ್ಲಿಯ ಪರಿಸ್ಥಿತಿಯಲ್ಲಿ, ಚೆಂಡು ಎದುರಾದಾಗ ಸೊಂಟದ ಎತ್ತರದಲ್ಲಿದ್ದರೂ, ಅದು ಕ್ರೀಸ್ ದಾಟಿದಾಗ, ಅದು ಸೊಂಟದ ಎತ್ತರಕ್ಕಿಂತ ಕೆಳಗಿತ್ತು, ಅಧಿಕೃತ ನಿಯಮದ ಪ್ರಕಾರ ಇದು ನ್ಯಾಯೋಚಿತ ಎಸೆತವಾಗಿದೆ” ಎಂದು ಹೇಳಿದೆ.