ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ತನ್ನ ಎದುರಾಳಿ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೈದಾನದ ಹೊರಗೆ ಅದರಲ್ಲೂ ಪ್ರಾಣಿಗಳ ವಿಷಯದಲ್ಲಿ ಕರುಣಾ ಹೃದಯಿ ಎಂಬ ಅಂಶ ಮತ್ತೊಮ್ಮೆ ಸಾಬೀತಾಗಿದೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಭಾರತ ಸಂಸ್ಥೆಯ ವರ್ಷದ ವ್ಯಕ್ತಿಯಾಗಿ ಕೊಹ್ಲಿ ಆಯ್ಕೆಯಾಗಿದ್ದಾರೆ. ಕೊಹ್ಲಿ ಅವರು ಪ್ರಾಣಿಗಳ ಹಕ್ಕುಗಳ ಬೆಂಬಲಿಗರಾಗಿದ್ದಾರೆ ಮಾತ್ರವಲ್ಲದೇ ದೇಶದಲ್ಲಿ ಪ್ರಾಣಿಗಳ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರ ಪ್ರಯತ್ನಗಳನ್ನು ಗುರುತಿಸಿರುವ ಪೇಟಾ ಸಂಸ್ಥೆ ಅವರನ್ನು 2019ರ ವರ್ಷದ ವ್ಯಕ್ತಿಯನ್ನಾಗಿ ಆಯ್ಕೆಮಾಡಿದೆ.
ವಿರಾಟ್ ಕೊಹ್ಲಿ ಅವರು ಈ ಹಿಂದೆ, ರಾಜಸ್ಥಾನದ ಅಮೇರ್ ಕೋಟೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಉಪಯೋಗಿಸುತ್ತಿದ್ದ ಮಾಲ್ತಿ ಎಂಬ ಆನೆಗೆ ಎಂಟು ಜನರು ನಿರ್ದಯವಾಗಿ ಥಳಿಸುತ್ತಿದ್ದ ವಿಷಯವನ್ನು ಹಾಗೂ ಮಾಲ್ತಿ ಆನೆಯನ್ನು ಸೇವೆಯಿಂದ ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಪತ್ರದ ಮೂಲಕ ಭಾರತದಲ್ಲಿರುವ ಪೇಟಾ ಸಂಸ್ಥೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಇನ್ನು ಪ್ರಾಣಿಗಳಿಗೆ ಹಿಂಸೆ ತಡೆ ಕಾಯ್ದೆ, 1960ರ ಜಾರಿಗೆ ಪೇಟಾ ಇಂಡಿಯಾ ನೀಡಿರುವ ಕರೆಯನ್ನು ವಿರಾಟ್ ಕೊಹ್ಲಿ ಬೆಂಬಲಿಸಿದ್ದರು. ಈ ಕಾಯ್ದೆ ಮೂಲಕ ಪ್ರಾಣಿಗಳಿಗೆ ಹಿಂಸೆ ನೀಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.
ಇನ್ನು ಸ್ವತಃ ಸಸ್ಯಾಹಾರಿಯಾಗಿರುವ ವಿರಾಟ್ ಕೊಹ್ಲಿ ಅವರು ಬೆಂಗಳೂರಿನಲ್ಲಿರುವ ಗಾಯಗೊಂಡ ಮತ್ತು ಅನಾಥ ಪ್ರಾಣಿಗಳ ಸೇವಾ ಕೇಂದ್ರಕ್ಕೆ ಆಗಾಗ್ಗೆ ಭೇಟಿ ನೀಡಿ ಗಾಯಗೊಂಡಿರುವ ಮತ್ತು ಬೀದಿ ಪಾಲಾಗಿರುವ ನಾಯಿಗಳ ಜೊತೆ ಸ್ವಲ್ಪ ಸಮಯವನ್ನು ಕಳೆಯುತ್ತಾರೆ ಮತ್ತು ತಮ್ಮ ಅಭಿಮಾನಿಗಳಿಗೆ ಇಂತಹ ಅನಾಥ ಪ್ರಾಣಿಗಳ ಸಾಕು ಕೇಂದ್ರಗಳಿಂದಲೇ ಸಾಕು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್, ಸುಪ್ರೀಂ ಕೋರ್ಟ್ ನ ಮಾಜೀ ಮುಖ್ಯ ನ್ಯಾಯಮೂರ್ತಿ ಕೆ.ಎಸ್. ಪಣಿಕ್ಕರ್ ರಾಧಾಕೃಷ್ಣನ್, ನಟಿ ಅನುಷ್ಕಾ ಶರ್ಮಾ, ಸನ್ನಿ ಲಿಯೋನ್, ಸೋನಮ್ ಕಪೂರ್, ಕಪಿಲ್ ಶರ್ಮಾ, ಹೇಮಾ ಮಾಲಿನಿ, ಆರ್. ಮಾಧವನ್, ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಈ ಹಿಂದೆ ಪೇಟಾ ಇಂಡಿಯಾದ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.