Advertisement

ಕೊಹ್ಲಿ ವಿಶ್ವ ಕಂಡ ಅದ್ಭುತ ಆಟಗಾರ: ರೋಶನ್‌ ಸಿಲ್ವ

10:00 AM Mar 21, 2018 | Karthik A |

ಮಂಗಳೂರು: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವ ಕಂಡ ಅದ್ಭುತ ಆಟಗಾರ. ಅಲ್ಲದೆ ಒಂದು ತಂಡವನ್ನು ಚೆನ್ನಾಗಿ ನಿಭಾಯಿಸಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿ ಎಂದು ಶ್ರೀಲಂಕಾ ತಂಡದ ಟೆಸ್ಟ್‌ ಕ್ರಿಕೆಟಿಗ ರೋಶನ್‌ ಸಿಲ್ವ ತಿಳಿಸಿದರು. ನಗರದ ಪ್ರಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡದ ನಾಯಕನಾಗಿ ಸಲಹೆ ನೀಡುವುದು ಸುಲಭ. ಆದರೆ ಸಲಹೆ ನೀಡಿದ್ದನ್ನು ತಾನೇ ಆಟದ ಮೂಲಕ ತೋರಿಸುವುದು ಕಷ್ಟ. ಕೊಹ್ಲಿ ಶ್ರಮಜೀವಿಯಾಗಿದ್ದು , ಅದನ್ನು ಕೆಲವು ಆಟಗಳಲ್ಲಿ ನಾವು ನೋಡಿದ್ದೇವೆ ಎಂದರು.

Advertisement

ಮಂಗಳೂರಿನ ಹವಾಮಾನ ಮತ್ತು ಆಹಾರ ಪದ್ಧತಿ ಶ್ರೀಲಂಕಾದಂತೆಯೇ ಹೋಲಿಕೆಯಾಗುತ್ತಿದ್ದು, ಈ ನಗರ ನನಗೆ ತುಂಬಾ ಇಷ್ಟವಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಎಂಪಿಎಲ್‌ ಟೂರ್ನಿಯಲ್ಲಿ ಟಿ-4 ಸೂಪರ್‌ ಕಿಂಗ್ಸ್‌ ತಂಡದ ರಾಯಭಾರಿಯಾಗಿ ಆಯ್ಕೆಯಾಗಿರುವುದು ತುಂಬಾ ಖುಷಿ ನೀಡಿದೆ. 4 ದಿನಗಳ ಕಾಲ ಮಂಗಳೂರಿನಲ್ಲಿದ್ದು, ತಂಡವನ್ನು ಬೆಂಬಲಿಸುವೆ. ವೆಸ್ಟ್‌ ಇಂಡೀಸ್‌ ಪ್ರವಾಸ ಹಿನ್ನೆಲೆಯಲ್ಲಿ  ಫೈನಲ್‌ ಪಂದ್ಯಕ್ಕೆ ಬರುವುದು ಅನುಮಾನ ಎಂದರು.

ಟಿ-4 ಸೂಪರ್‌ ಕಿಂಗ್ಸ್‌ ಮಾಲಕ ಮಾರ್ಷೆಲ್‌ ನೊರೋನ್ಹಾರ ಮಗ ಶ್ರೀಲಂಕಾದ ವಸಂತನ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದರು. ಆ ಮೂಲಕ ನನಗೆ ಮಂಗಳೂರಿನ ಪರಿಚಯವಾಗಿ, ರಾಯಭಾರಿ ಅವಕಾಶ ದೊರೆತಿದೆ. ವಸಂತನ್‌ ಈಗ ಟಿ-4 ಸೂಪರ್‌ ಕಿಂಗ್ಸ್‌ ತರಬೇತುದಾರರಾಗಿದ್ದಾರೆ ಎಂದರು.

ಟಿ-4 ಸೂಪರ್‌ ಕಿಂಗ್ಸ್‌ ತಂಡದ ಮಾಲಕ ಮಾರ್ಷೆಲ್‌ ನೊರೋನ್ಹಾ ಮಾತನಾಡಿ, ಟಿ-4 ತಂಡವು ಬುಧವಾರ ಮೊದಲ ಪಂದ್ಯವನ್ನು ಆಡಲಿದೆ. ತಂಡದಲ್ಲಿ 3 ರಾಜ್ಯಮಟ್ಟದ ನಾಯಕರಿದ್ದು, 9 ಮಂಗಳೂರಿನ ಆಟಗಾರರಿದ್ದಾರೆ. ವಿದೇಶಿ ಕೋಚ್‌ ವಸಂತನ್‌, ರಾಯಭಾರಿ ರೋಶನ್‌ ಸೇರಿದಂತೆ ತಂಡ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಟೀಮ್‌ ನಿರ್ದೇಶಕ ಹ್ಯಾರಿಸ್‌ ಮೊಹಮ್ಮದ್‌, ಟೀಮ್‌ ಮ್ಯಾನೇಜರ್‌ ಜಿ. ಗಣೇಶ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next